ಮದ್ದೂರು: ಸಾಲಬಾಧೆಗೆ ರೈತ ಆತ್ಮಹತ್ಯೆ
ಮದ್ದೂರು, ಫೆ.13: ತಾಲೂಕಿನ ಸೊಳ್ಳೇಪುರ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣುಬಿಗಿದುಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ಚಿಣ್ಣೇಗೌಡರ ಮಗ ಎಸ್.ಸಿ.ಪ್ರಸನ್ನ(43) ಮೃತ ರೈತ. ಇವರಿಗೆ 4 ಎಕರೆ ಜಮೀನು ಇದೆ. ಕೃಷಿ ಚಟುವಟಿಕೆಗೆ ಬೆಸಗರಹಳ್ಳಿ ವಿಜಯಬ್ಯಾಂಕಿನಲ್ಲಿ 1.5 ಲಕ್ಷ, ವಳೆಗೆರೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 35 ಸಾವಿರ ಹಾಗೂ ಖಾಸಗಿಯಾಗಿ 1.75 ಲಕ್ಷ ರೂ.ಸಾಲ ಮಾಡಿದ್ದರು. ಸಾಲಗಾರರ ಕಾಟ ತಾಳಲಾರದೆ ತಮ್ಮ ಜಮೀನಿನಲ್ಲಿ ಮಂಗಳವಾರ ಬೆಳಗ್ಗೆ ಬೇವಿನ ಮರಕ್ಕೆ ತನ್ನ ಲುಂಗಿಯಿಂದ ನೇಣುಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ದೂರು ನೀಡಲಾಗಿದೆ.
ಮೃತರಿಗೆ ಪತ್ನಿ ಸುಧಾರಾಣಿ ಹಾಗೂ ಹೆಣ್ಣುಮಕ್ಕಳಾದ ಕೀರ್ತನ, ತೇಜಸ್ವಿನಿ ಇದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪರಿಹಾರಕ್ಕೆ ಒತ್ತಾಯ: ಮೃತ ರೈತನ ಕುಟುಂಬವರ್ಗ ಅತ್ಯಂತ ಸಂಕಷ್ಟದಲ್ಲಿದ್ದು, ಕೂಡಲೇ ಸರಕಾರ 5 ಲಕ್ಷ ರೂ. ಪರಿಹಾರ ವಿತರಿಸಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಒತ್ತಾಯಿಸಿದ್ದಾರೆ.