ಮಠದ ಕೋಟ್ಯಾಂತರ ರೂ. ಆಸ್ತಿ ಕಬಳಿಕೆಗೆ ಮೃತ ಸ್ವಾಮೀಜಿಯ ವೇಷ ಧರಿಸಿದರು!

Update: 2018-02-14 15:09 GMT

ಶಿವಮೊಗ್ಗ, ಫೆ. 14: ಮಠವೊಂದರ ಕೋಟ್ಯಂತರ ರೂ. ಆಸ್ತಿ ಕಬಳಿಸುವ ಉದ್ದೇಶದಿಂದ ಮೃತಪಟ್ಟ ಸ್ವಾಮೀಜಿಯ ವೇಷ ಧರಿಸಿದ ಜ್ಯೋತಿಷಿ ಹಾಗೂ ಸ್ವಾಮೀಜಿಯ ಪರಿಚಾರಕನಂತೆ ನಟಿಸುತ್ತಿದ್ದ ಹಿಂಬಾಲಕ ಪೊಲೀಸರ ಅತಿಥಿಯಾಗಿರುವ ಕುತೂಹಲಕಾರಿ ಘಟನೆ ನಡೆದಿದೆ.

ಶಿವಮೊಗ್ಗ ತಾಲೂಕು ಹಾರನಹಳ್ಳಿ ಸಮೀಪದ ವಿಠಗೊಂಡನಕೊಪ್ಪ ಗ್ರಾಮದ ಶಿವಕುಮಾರ್ (48) ಹಾಗೂ ಹಾರ್ನಹಳ್ಳಿ ಸಮೀಪದ ಚಾಮೇನಹಳ್ಳಿಯ ನಿವಾಸಿ ವೀರೇಶ್ (40) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿ ಶಿವಕುಮಾರ್ ಹಾರ್ನಹಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಜ್ಯೋತಿಷ್ಯ ಹಾಗೂ ವಧು-ವರರ ಅನ್ವೇಷಣಾ ಕೇಂದ್ರ ನಡೆಸುತ್ತಿದ್ದು, ವೀರೇಶ್ ಗದ್ದೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ.

ಸಬ್ ಇನ್‌ಸ್ಪೆಕ್ಟರ್ ಜಿ.ಎಸ್. ಸಂದೀಪ್ ನೇತೃತ್ವದ ಪೊಲೀಸ್ ತಂಡವು ವಿಠಗೊಂಡನಕೊಪ್ಪದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಇಬ್ಬರು ಆರೋಪಿಗಳನ್ನು ಬುಧವಾರ ಶಿವಮೊಗ್ಗದ 2 ನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂಭಾಗ ಪೊಲೀಸರು ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಂಚನೆಗೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಇಬ್ಬರು ವಕೀಲರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ವಕೀಲರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ಲ್ಯಾನ್?: ಶಿವಮೊಗ್ಗ ತಾಲೂಕಿನ ಹಾರ್ನಹಳ್ಳಿಯ ಶ್ರೀರಾಮಲಿಂಗೇಶ್ವರ ಮಠಕ್ಕೆ ಸೇರಿದ ನೂರಾರು ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿದೆ. ಇದನ್ನು ಕಬಳಿಸಲು ಬಂಧಿತ ಆರೋಪಿಗಳು ಹಾಗೂ ತಲೆಮರೆಸಿಕೊಂಡಿರುವ ಇಬ್ಬರು ವಕೀಲರು ತಂತ್ರ ರೂಪಿಸಿದ್ದರು. ಅದರಂತೆ, ರಾಮಲಿಂಗೇಶ್ವರ ಮಠದ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ 2014 ರಲ್ಲಿಯೇ ಮೃತಪಟ್ಟಿದ್ದರೂ, ಅವರು ಜೀವಂತವಾಗಿದ್ದಾರೆ ಎಂಬ ದಾಖಲೆಯನ್ನು ವಂಚಕರ ತಂಡ ಸೃಷ್ಟಿ ಮಾಡಿತ್ತು. ಅಲ್ಲದೆ, ಚಂದ್ರಮೌಳೇಶ್ವರ ಸ್ವಾಮೀಜಿಯ ಹೋಲಿಕೆ ಹೊಂದಿದ್ದ ಜ್ಯೋತಿಷಿ ಹಾಗೂ ವಧುವರರ ಅನ್ವೇಷಣಾ ಕೇಂದ್ರ ತೆರೆದುಕೊಂಡಿದ್ದ ಆರೋಪಿ ಶಿವಕುಮಾರ್‌ನಿಗೆ ಮೃತಪಟ್ಟ ಶಿವಾಚಾರ್ಯ ಸ್ವಾಮೀಜಿಯ ವೇಷ ತೊಡಿಸಲಾಗಿತ್ತು.

ಹಾರನಹಳ್ಳಿ ಸಮೀಪದ ಸಂಕದಕೊಪ್ಪ ಗ್ರಾಮದಲ್ಲಿ ಚಂದ್ರಮೌಳೇಶ್ವರ ಸ್ವಾಮೀಜಿ ಜೀವಂತವಾಗಿದ್ದಾಗ ಒಂದೂವರೆ ಎಕರೆ ಜಮೀನು ಖರೀದಿಗೆ ನಿರ್ಧರಿಸಿ, ಸಂಬಂಧಿಸಿದ ಭೂ ಮಾಲಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಅವರ ಅಕಾಲಿಕ ನಿಧನದಿಂದ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಮತ್ತೊಂದೆಡೆ ಜಮೀನಿನ ಮಾಲಕನ ಬಳಿ ಆರೋಪಿ ಶಿವಕುಮಾರ್, ತಾನೇ ಚಂದ್ರ ಮೌಳೇಶ್ವರ ಸ್ವಾಮೀಜಿ ಎಂದು ನಂಬಿಸಿ, ಆ ಜಮೀನನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದ ಎನ್ನಲಾಗಿದೆ.

ದೂರು ದಾಖಲು: ಈ ವಂಚನೆಯ ಮಾಹಿತಿ ಅರಿತ ರಾಮಲೀಗೇಶ್ವರ ಮಠದ ವಿಶ್ವಾರಾಧ್ಯ ಸ್ವಾಮೀಜಿ ಹಾಗೂ ನೀಲಕಂಠೇಶ್ವರ ದೇಶಿಕೇಂದ್ರ ಸ್ವಾಮೀಜಿಗಳು ಕುಂಸಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಿಸಿದ್ದರು. ಎಫ್‌ಐಆರ್ ದಾಖಲಿಸಿಕೊಂಡ ಸಬ್ ಇನ್‌ಸ್ಪೆಪೆಕ್ಟರ್ ಜಿ.ಎಸ್.ಸಂದೀಪ್, ಸ್ವಾಮೀಜಿ ವೇಷಧಾರಿ ಹಾಗೂ ಆತನ ಪರಿಚಾರಕನಂತೆ ಓಡಾಡಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ನಕಲಿ ಆಧಾರ್,ಮತದಾರ ಚೀಟಿ 
ಚಂದ್ರಮೌಳೇಶ್ವರ ಸ್ವಾಮೀಜಿ ಹೆಸರಿನಲ್ಲಿಯೇ ಭಾವಚಿತ್ರ ಸಹಿತ ಮತದಾರರ ಚೀಟಿ (ಎಪಿಕ್ ಕಾರ್ಡ್) ಹಾಗೂ ಆಧಾರ್ ಕಾರ್ಡ್ ಕೂಡ ಮಾಡಿಸಲಾಗಿತ್ತು. ಇದರ ಆಧಾರದ ಮೇಲೆ ಬೆಂಗಳೂರಿನ ರೇಸ್‌ಕೋರ್ಸ್ ಹಾಗೂ ಯಲಹಂಕದ ಬಳಿಯಿದ್ದ ಸುಮಾರು ಎರಡು ಸ್ಥಿರಾಸ್ತಿಗಳನ್ನು 15 ಕೋಟಿ ರೂ.ಗೆ ಪರಭಾರೆ ಮಾಡಲು ವ್ಯಕ್ತಿಯೋರ್ವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಮುಂಗಡವಾಗಿ 2 ಕೋಟಿ ರೂ.ಕೂಡ ಈ ತಂಡ ಪಡೆದುಕೊಂಡಿತ್ತು ಎನ್ನಲಾಗಿದೆ.

ಸ್ವಾಮೀಜಿ ವೇಷ ಧರಿಸಿ ಕಚೇರಿಗಳಿಗೆ ಅಲೆದಾಡುತ್ತಿದ್ದ...!
ಮೃತಪಟ್ಟಿರುವ ಸ್ವಾಮೀಜಿಯ ವೇಷ ಧರಿಸಿ ಆರೋಪಿ ಶಿವಕುಮಾರ ಸರಕಾರಿ ಕಚೇರಿಗಳಿಗೆ ಹಾಗೂ ಸ್ಥಿರಾಸ್ತಿ ಕೊಂಡುಕೊಳ್ಳುವವರ ಬಳಿ ಓಡಾಡಿಕೊಂಡಿದ್ದ. ಸ್ವಾಮೀಜಿಯ ಸೇವೆ ಮಾಡುವ ರೀತಿಯಲ್ಲಿ ಪರಿಚಾರಕನ ಸೋಗಿನಲ್ಲಿ ಆರೋಪಿ ವೀರೇಶ್ ನಟಿಸುತ್ತಿದ್ದ ಎನ್ನಲಾಗಿದೆ.

ಬೆಂಗಳೂರಿನ ಯಲಹಂಕದಲ್ಲಿರುವ ಮಠಕ್ಕೆ ಸೇರಿದ ಜಮೀನೊಂದರ ವಿವಾದ ಸ್ಥಳೀಯ ಎ.ಸಿ. ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಈ ಪ್ರಕರಣದ ವಿಚಾರಣೆಗೂ ಶಿವಕುಮಾರ್, ಸ್ವಾಮೀಜಿ ವೇಷದಲ್ಲಿ ಭಾಗಿಯಾಗಿದ್ದ. ಸಬ್ ರಿಜಿಸ್ಟಾರ್ ಕಚೇರಿ ಸೇರಿದಂತೆ ಹಲವೆಡೆ ಈತ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿಯ ರೀತಿಯಲ್ಲಿ ವ್ಯವಹಾರ ನಡೆಸಿದ್ದಾನೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News