ಶಿವಮೊಗ್ಗ: ಲಾರಿ ಮಾಲಿಕನಿಂದ ಲಂಚ ಸ್ವೀಕಾರ; ಎಸಿಬಿ ಬಲೆಗೆ ಬಿದ್ದ ತೀರ್ಥಹಳ್ಳಿ ಸಿಡಿಪಿಓ

Update: 2018-02-14 17:08 GMT

ಶಿವಮೊಗ್ಗ, ಫೆ. 14: ಅಂಗನವಾಡಿಗಳಿಗೆ ಆಹಾರ ಸರಬರಾಜು ಮಾಡುವ ಲಾರಿ ಮಾಲೀಕನಿಂದ ಲಂಚ ಪಡೆಯುತ್ತಿದ್ದ ತೀರ್ಥಹಳ್ಳಿ ತಾಲೂಕಿನ ಸಿಡಿಪಿಓ (ಶಿಶು ಅಭಿವೃದ್ದಿ ಯೋಜನಾಧಿಕಾರಿ) ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದ ಬಲೆಗೆ ಬಿದ್ದ ಘಟನೆ ಶಿವಮೊಗ್ಗ ನಗರದಲ್ಲಿ ಬುಧವಾರ ನಡೆದಿದೆ. 

ತೀರ್ಥಹಳ್ಳಿ ತಾಲೂಕಿನ ಸಿಡಿಪಿಓ ಕುಲಕರ್ಣಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ ಎಂದು ಗುರುತಿಸಲಾಗಿದೆ. ಇವರ ವಿರುದ್ದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಸಿಬಿ ಪೊಲೀಸರು ಪ್ರಕರಣ ದಾಖಲಿಕೊಂಡು, ತನಿಖೆ ಮುಂದುವರಿಸಿದ್ದಾರೆ. ಡಿವೈಎಸ್‍ಪಿ ಚಂದ್ರಪ್ಪ, ಇನ್ಸ್ ಪೆಕ್ಟರ್ ಗಳಾದ ತಿಪ್ಪೇಸ್ವಾಮಿ, ಮಹಮ್ಮದ್ ಸಲೀಂ ನೇತೃತ್ವದ ಪೊಲೀಸ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.  

ಘಟನೆ ಹಿನ್ನೆಲೆ: ತೀರ್ಥಹಳ್ಳಿ ತಾಲೂಕಿನ ಅಂಗನವಾಡಿಗಳಿಗೆ ಆಹಾರ ಸರಬರಾಜು ಮಾಡಲು ಭುಜಂಗರವರು ಎರಡು ಲಾರಿಗಳನ್ನು ಬಿಟ್ಟಿದ್ದರು. ನಿಯಮಾನುಸಾರ ಪ್ರತಿ ತಿಂಗಳು ಲಾರಿ ಬಾಡಿಗೆಯನ್ನು ಸಿಡಿಪಿಓ ಕಚೇರಿಗೆ ಪಾವತಿಸಿ ಬಿಲ್ ಪಡೆದುಕೊಳ್ಳುತ್ತಿದ್ದರು. ಆದರೆ ಬಾಡಿಗೆ ಮೊತ್ತದ ಹಣ ಬಿಡುಗಡೆಗೆ ಅನುಮತಿ ನೀಡಲು ಸಿಡಿಪಿಓ ಕುಲಕರ್ಣಿಯವರು ಭುಜಂಗರವರಿಂದ ಪ್ರತಿ ತಿಂಗಳು 10 ಸಾವಿರ ರೂ. ಲಂಚ ಕೇಳುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ಭುಜಂಗರವರು ಇತ್ತೀಚೆಗೆ ಎಸಿಬಿಗೆ ದೂರು ನೀಡಿದ್ದರು. ಎಸಿಬಿಯ ಸೂಚನೆಯಂತೆ ಭುಜಂಗರವರು ಬುಧವಾರ ನಗರದ ಬಸ್ ನಿಲ್ದಾಣ ಸಮೀಪದ ಖಾಸಗಿ ಟ್ರಾನ್ಸ್ ಪೋರ್ಟ್ ಕಚೇರಿಯಲ್ಲಿ ಸಿಡಿಪಿಓ ಕುಲಕರ್ಣಿಯವರಿಗೆ 8 ಸಾವಿರ ರೂ. ಲಂಚ ನೀಡುತ್ತಿದ್ದ ವೇಳೆ ಎಸಿಬಿ ಪೊಲೀಸ್ ತಂಡ ದಾಳಿ ನಡೆಸಿ ಹಣದ ಸಮೇತ ಕುಲಕರ್ಣಿಯವರನ್ನು ವಶಕ್ಕೆ ಪಡೆದುಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News