ಶಿವಮೊಗ್ಗ: ಕುವೆಂಪು ವಿವಿಯಲ್ಲಿ ಭಾರೀ ಹಗರಣ ಆರೋಪ; ತನಿಖೆಗೆ ಆಗ್ರಹ

Update: 2018-02-14 17:16 GMT

ಶಿವಮೊಗ್ಗ, ಫೆ. 14: ಕುವೆಂಪು ವಿಶ್ವ ವಿದ್ಯಾನಿಲಯದ ಹಣಕಾಸು ವ್ಯವಹಾರದಲ್ಲಿ ಭಾರೀ ಗೋಲ್‍ಮಾಲ್ ನಡೆದಿದೆ. ಕೋಟ್ಯಾಂತರ ರೂ. ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. ಜ್ಞಾನ ದೇಗುಲವನ್ನು ಭ್ರಷ್ಟಾಚಾರಿಗಳಿಂದ ರಕ್ಷಣೆ ಮಾಡಬೇಕು ಎಂದು ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ.ಜೆ.ಮಧುಸೂಧನ್ ಕೇಂದ್ರ - ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ನಕಲಿ ಉತ್ತರ ಪತ್ರಿಕೆ ಹಾಗೂ ಅಂಕಪಟ್ಟಿ ಹಗರಣ ಬೆಳಕಿಗೆ ಬಂದ ನಂತರ ಕುವೆಂಪು ವಿವಿಯು ರಾಷ್ಟ್ರಮಟ್ಟದಲ್ಲಿ ಅಪಖ್ಯಾತಿಗೆ ತುತ್ತಾಗಿತ್ತು. ವಿವಿಯಲ್ಲಿ ಅಭ್ಯಾಸ ನಡೆಸಿದ ವಿದ್ಯಾರ್ಥಿಗಳನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆಯ ನಂತರ ವಿವಿಯ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ನಿರೀಕ್ಷೆ ಮಾಡಲಾಗಿತ್ತು. 
ಆದರೆ ಹಗರಣದ ನಂತರವೂ ವಿವಿಯ ಹಣಕಾಸು ವ್ಯವಹಾರದಲ್ಲಿ ಮತ್ತಷ್ಟು ಗೋಲ್‍ಮಾಲ್‍ಗಳು ಎಗ್ಗಿಲ್ಲದೆ ನಡೆಯುತ್ತಿವೆ. ಹಗರಣದ ಸುಧಾರಣೆ ವ್ಯವಸ್ಥೆಯಲ್ಲಿಯೇ ಲೂಟಿಯ ಮಾರ್ಗವನ್ನು ಸೃಷ್ಟಿಸಿಕೊಳ್ಳಲಾಗಿದೆ. ಕೋಟ್ಯಾಂತರ ರೂ. ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಹಣವನ್ನು ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಷ್ಟೆಲ್ಲ ಅವ್ಯವಹಾರ ನಡೆದುಕೊಂಡು ಬರುತ್ತಿದ್ದರೂ ಹಿರಿಯ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಉತ್ತರ ಪತ್ರಿಕೆ- ಅಂಕಪಟ್ಟಿ ನಕಲು ಹಗರಣದ ನಂತರ ವಿವಿಯ ಪರೀಕ್ಷಾಂಗ ವಿಭಾಗದಲ್ಲಿ ಸುಧಾರಣೆ ತರಲಾಗಿತ್ತು. ಪ್ರತಿಯೊಂದು ವಿಭಾಗದಲ್ಲಿಯೂ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿತ್ತು. ಇದಕ್ಕಾಗಿಯೇ 2 ಕೋಟಿ ರೂ. ವ್ಯಯಿಸಲಾಗಿತ್ತು. ಇದೆಲ್ಲದರ ಹೊರತಾಗಿಯೂ ಪರೀಕ್ಷಾಂಗದ ಕೆಲಸಗಳನ್ನು ವಿವಿಯ ಸಿಬ್ಬಂದಿಗಳಿಗೆ ವಹಿಸದೆ ಹೊರಗುತ್ತಿಗೆ ನೀಡಲಾಗಿದೆ. ಲಕ್ಷಾಂತರ ರೂ.ಗಳನ್ನು ಖಾಸಗಿ ಏಜೆನ್ಸಿಗೆ ನೀಡಲಾಗುತ್ತಿದೆ. ಇದರಿಂದ ಪರೀಕ್ಷಾಂಗ ವಿಭಾಗವು ಏನು ಕೆಲಸ ಮಾಡಲಿದೆ ಎಂದು ಪ್ರಶ್ನಿಸಿದ್ದಾರೆ. 

ಪರೀಕ್ಷಾಂಗ ವಿಭಾಗದ ಜವಾಬ್ದಾರಿ ವಹಿಸಲಾಗಿರುವ ಖಾಸಗಿ ಏಜೆನ್ಸಿಯು ಈ ಹಿಂದೆ ವಿವಿಯೊಂದರ ಪರೀಕ್ಷಾಂಗ ಕಾರ್ಯದ ನಿರ್ವಹಣೆಯಲ್ಲಿ ಅಕ್ರಮ ಎಸಗಿದ ಆರೋಪ ಕೇಳಿಬಂದಿತ್ತು. ಇದೀಗ ಅಂತಹ ಸಂಸ್ಥೆಗೆ ವಿವಿಯ ಪರೀಕ್ಷಾಂಗ ಕಾರ್ಯದ ಜವಾಬ್ದಾರಿ ವಹಿಸಲಾಗಿದೆ. ಇದರ ಹಿಂದೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ತಕ್ಷಣವೇ ಹೊರಗುತ್ತಿಗೆ ರದ್ದುಪಡಿಸಬೇಕು. ಈ ಮೂಲಕ ವಿವಿಗೆ ಆಗುತ್ತಿರುವ ಕೋಟ್ಯಾಂತರ ರೂ. ನಷ್ಟ ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. 

ವಿವಿಯ ದಾಖಲೆ, ವಿದ್ಯಾರ್ಥಿಗಳ ಅಂಕಪಟ್ಟಿ, ಪ್ರಮಾಣಪತ್ರಗಳನ್ನು ಡಿಜಟಲೀಕರಣ ಹಾಗೂ ಇ-ವೆರಿಫಿಕೇಷನ್ ವ್ಯವಸ್ಥೆ ಮಾಡಲು ಸಂಸ್ಥೆಯೊಂದಕ್ಕೆ ಹೊರಗುತ್ತಿಗೆ ನೀಡಿ ಲಕ್ಷಾಂತರ ರೂ. ಪಾವತಿಸಲಾಗಿದೆ. ಆದರೆ ಇಲ್ಲಿಯವರೆಗೂ ಆನ್‍ಲೈನ್ ಇ-ವೆರಿಫಿಕೇಷನ್ ವ್ಯವಸ್ಥೆ ಲಭ್ಯವಿಲ್ಲ. ಹಾಗೆಯೇ ಡಿಜಿಟಲೀಕರಣ ಪ್ರಕ್ರಿಯೆಯೂ ಸರಿಯಾಗಿ ನಡೆದಿಲ್ಲ. ಇದರಲ್ಲಿ ಅವ್ಯವಹಾರ ನಡೆದಿರುವ ಶಂಕೆಯಿದೆ. ವಿವಿಯ ಯಾವುದೇ ವ್ಯವಹಾರಗಳನ್ನು ನಗದು ರೂಪದಲ್ಲಿ ನಡೆಸುವಂತಿಲ್ಲ. ಆದರೆ ವಿವಿಯು 2014-15 ನೇ ಸಾಲಿನಲ್ಲಿ ಸುಮಾರು 7 ಕೋಟಿ ರೂ.ಗಳನ್ನು ನಗದು ರೂಪದಲ್ಲಿಯೇ ವ್ಯವಹಾರ ನಡೆಸಿದೆ. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರು ವಿವಿಯ ಹಣಕಾಸು ವ್ಯವಹಾರದಲ್ಲಿ ಭಾರೀ ಲೋಪಗಳನ್ನು ಗುರುತಿಸಿ ವರದಿ ನೀಡಿದ್ದಾರೆ. ಹೊರಗುತ್ತಿಗೆ ನೌಕರರ ನೇಮಕದಲ್ಲಿಯೂ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು. 

ಕುವೆಂಪು ವಿವಿಯ ಹಣಕಾಸು ವ್ಯವಹಾರದಲ್ಲಿ ಭಾರೀ ಪ್ರಮಾಣದ ಗೋಲ್‍ಮಾಲ್ ನಡೆದಿದೆ. ಕಾಮಗಾರಿಗಳಲ್ಲಿಯೂ ಹಣ ದುರ್ಬಳಕೆಯಾಗಿದೆ. ಈ ಕುರಿತಂತೆ ಕೇಂದ್ರ - ರಾಜ್ಯ ಸರ್ಕಾರಗಳು ಉನ್ನತ ಮಟ್ಟದ ತನಿಖೆಗೊಳಪಡಿಸಬೇಕು. ವಿವಿಯನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದರ ಜೊತೆಗೆ ವಿವಿಯ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ತರಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಗೋಷ್ಠಿಯಲ್ಲಿ ಎನ್‍ಎಸ್‍ಯುಐ ಸಂಘಟನೆಯ ರಾಜ್ಯ ಮುಖಂಡರಾದ ಕೆ.ಚೇತನ್, ಶ್ರೀಜಿತ್, ಶಿವಮೊಗ್ಗ ಜಿಲ್ಲಾಧ್ಯಕ್ಷ ಹೆಚ್.ಎಸ್.ಬಾಲಾಜಿ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News