ಮಡಿಕೇರಿ: ಜಮೀನು ವಿವಾದ; ಜೀವ ಬೆದರಿಕೆಯ ಆರೋಪ

Update: 2018-02-14 17:31 GMT

ಮಡಿಕೇರಿ, ಫೆ.14: ಅಕ್ರಮ ಸಕ್ರಮದಡಿ 2001ರಲ್ಲಿ ತಮ್ಮ ಸ್ವಾಧೀನಕ್ಕೆ ಒಳಪಟ್ಟ ಜೋಡುಪಾಲದ 2.50 ಏಕರೆ ಜಾಗವನ್ನು ಕೇರಳದ ವ್ಯಕ್ತಿಯೊಬ್ಬರು ನಕಲಿ ನಕ್ಷೆ ಸೃಷ್ಟಿಸಿ ಜಾಗವನ್ನು ಕಬಳಿಸಲು ಯತ್ನಿಸುತ್ತಿದ್ದು, ಗೂಂಡಾಗಳ ಮೂಲಕ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಜೋಡುಪಾಲ ಗ್ರಾಮದ ನಿವಾಸಿಗಳಾದ ವೈ.ಎ.ವೆಂಕಪ್ಪ ಹಾಗೂ ವೈ.ವಿ.ಭುವನೇಶ್ವರಿ ದಂಪತಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2001 ರಲ್ಲಿ ಅಕ್ರಮ ಸಕ್ರಮದಡಿ ಜಮೀನಿನ ಹಕ್ಕು ನಮಗೆ ಸಿಕ್ಕಿದ್ದು, ಕೃಷಿ ಚಟುವಟಿಕೆ ನಡೆಸುತ್ತಿದ್ದೇವೆ. ಆದರೆ, 2007 ರಲ್ಲಿ ನಮ್ಮ ಜಾಗದಲ್ಲಿ ಕೇರಳದ ವ್ಯಕ್ತಿಯ ಸರ್ವೇ ಸಂಖ್ಯೆಯನ್ನು ತೋರಿಸಿಕೊಂಡು ನಕಲಿ ನಕ್ಷೆ ಸೃಷ್ಟಿಸಿ ಜಾಗವನ್ನು ಕಸಿದುಕೊಳ್ಳುವ ಯತ್ನ ನಡೆಯುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

1984 ರಿಂದ ಈ ಪ್ರದೇಶದಲ್ಲಿ ಕೃಷಿ ಮಾಡಿಕೊಂಡು ಬರಲಾಗುತ್ತಿದ್ದು, ಇದೀಗ ಜಾಗವನ್ನು ಕಬಳಿಸಿ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವ ಯತ್ನಗಳು ನಡೆಯುತ್ತಿದೆ. ಕೇರಳದ ವ್ಯಕ್ತಿ ಅಪರಿಚಿತರನ್ನು ನಮ್ಮ ಮನೆಗೆ ಕಳುಹಿಸಿ ಜೀವಬೆದರಿಕೆ ಒಡ್ಡುತ್ತಿದ್ದಾರೆ. ಇದೇ ಫೆ.11 ರಂದು 6 ಮಂದಿಯ ತಂಡ ಮತ್ತೆ ನಮ್ಮ ಮನೆಗೆ ಅಕ್ರಮ ಪ್ರವೇಶ ಮಾಡಿ ಜಾಗ ಖಾಲಿ ಮಾಡಬೇಕು, ಇಲ್ಲದಿದ್ದರೆ ಮನೆಯನ್ನು ಬೀಳಿಸುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಇದರಿಂದ ನಮಗೆ ಆತಂಕದ ಪರಿಸ್ಥಿತಿ ಎದುರಾಗಿದ್ದು, ತಕ್ಷಣ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಕೇರಳದ ವ್ಯಕ್ತಿ ಸೃಷ್ಟಿಸಿಕೊಂಡಿರುವ ದಾಖಲೆಗಳು ನಕಲಿ ಎಂಬುವುದನ್ನು ದೃಢಪಡಿಸುವ ಮೂಲಕ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ವಿನಂತಿಸಿದರು. 

ಈಗಾಗಲೇ ಜಿಲ್ಲಾ ಪೊಲೀಸ್ ಉಪ ಅಧೀಕ್ಷಕರಿಗೆ ದೂರು ನೀಡಲಾಗಿದ್ದು, ಇವರಿಂದ ಸೂಕ್ತ ರಕ್ಷಣೆ ಮತ್ತು ಸ್ಪಂದನೆ ದೊರೆಯುತ್ತಿದೆ. ಆದರೆ, ಜಾಗದ ವಿವಾದದಲ್ಲಿ ನಾವು ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಜಿಲ್ಲಾಧಿಕಾರಿಗಳು ನಮ್ಮ ಜಮೀನಿನ ಹಕ್ಕು ನಮ್ಮ ಬಳಿ ಇದೆ ಎಂಬುವುದನ್ನು ಖಾತ್ರಿಪಡಿಸಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News