ಮತದಾನದಿಂದ ಯಾರೂ ವಂಚಿತರಾಗದಂತೆ ಅಂಚೆ ಮತದಾನಕ್ಕೆ ಕ್ರಮ: ಡಿ.ರಂದೀಪ್

Update: 2018-02-14 17:47 GMT

ಮೈಸೂರು,ಫೆ.14: ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 20 ರಿಂದ 25 ಸಾವಿರ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ. ಕೇವಲ 5 ಸಾವಿರ ಸಿಬ್ಬಂದಿಗಳ ಅಂಚೆ ಮತಗಳು ನಡೆಯುತ್ತವೆ. ಯಾವುದೇ ಸಿಬ್ಬಂದಿ ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಕಾರ್ಯನಿರತ ಸಿಬ್ಬಂದಿಗಳು ಶೇ100ರಷ್ಟು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ, ಅಂಚೆ ಮತದಾನಕ್ಕೆ ಬೇಕಾಗುವ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದರು. 

ನಗರದ ಜಲದರ್ಶಿನಿ ಸಭಾಂಗಣದಲ್ಲಿ ಬುಧವಾರ ವಿಧಾನಸಭಾ ಚುನಾವಣೆ ಸಂಬಂಧ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾಡಳಿತದ ವತಿಯಿಂದ ಚುನಾವಣಾ ಸಿಬ್ಬಂದಿಗಳಿಗೆ ನೇಮಕಾತಿ ಅರ್ಜಿ ನೀಡಲಾಗುವುದು. ಕಾರ್ಯನಿರತ ಚುನಾವಣಾ ಸಿಬ್ಬಂದಿಗಳು ನಮೂನೆ 12ನ್ನು ಭರ್ತಿ ಮಾಡಿ ನೀಡಿದರೆ, ಸಿಬ್ಬಂದಿಗಳು ಕೆಲಸ ನಿರ್ವಹಿಸುವ ಸ್ಥಳದಲ್ಲಿಯೇ ಮತದಾನ ಮಾಡಬಹುದು. ಅವರು ಮತದಾನ ಮಾಡಿದ ಅಂಚೆ ಮತ ಬ್ಯಾಲೆಟ್ ಪತ್ರವನ್ನು ಅಲ್ಲಿಯೇ ಪಡೆಯಲಾಗುವುದು ಎಂದು ಹೇಳಿದರು.

ಚುನಾವಣೆ ದಿನಾಂಕವು ನಿಗದಿಯಾದ ನಂತರ  ಜಿಲ್ಲೆಯ ಯಾವುದೇ ಕ್ಷೇತ್ರಗಳಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಫ್ಲೆಕ್ಸ್ ಗಳನ್ನು ತೆರವುಗೊಳಿಸಬೇಕು. ಅದಕ್ಕೆ ಅಧಿಕಾರಿಗಳು ತಂಡವನ್ನು ಸಿದ್ಧಪಡಿಸಿಕೊಳ್ಳಬೇಕು. ಚುನಾವಣೆ ಸಹಾಯವಾಣಿಯಲ್ಲಿ ಯಾವುದೇ ದೂರುಗಳು ಬಂದರೆ ಅದನ್ನು ಪಟ್ಟಿ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ 33 ಜನ ವೀಕ್ಷಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ, ಜಿಲ್ಲಾ ಪಂಚಾಯತ್ ಯೋಜನಾ ನಿರ್ವಹಣಾಧಿಕಾರಿ ಪ್ರಭುಸ್ವಾಮಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ಧನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್  ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News