ದಾವಣಗೆರೆ: ನೀರು ಪೂರೈಕೆಗೆ ಒತ್ತಾಯಿಸಿ ರೈತರಿಂದ ಧರಣಿ

Update: 2018-02-14 17:59 GMT

ದಾವಣಗೆರೆ,ಫೆ.14 : ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ರೈತ ಒಕ್ಕೂಟದ ನೇತೃತ್ವದಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ಕೊನೆ ಭಾಗದ ರೈತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕಳೆದ ಜ.5 ರಿಂದ ಭದ್ರಾ ನಾಲೆಗೆ ನೀರು ಹರಿಸಲಾಗುತ್ತಿದೆ. ಅದರೆ, 42 ದಿನಗಳು ಕಳೆದರು ಸಹ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಗ್ರಾಮಗಳಾದ ಕಕ್ಕರಗೊಳ್ಳ, ಆವರಗೊಳ್ಳ, ಕೋಡಿಹಳ್ಳಿ, ಕೊಂಡಜ್ಜಿ, ಗಂಗನರಸಿ, ಕಡ್ಲೆಬಾಳು, ಮಾಗನಹಳ್ಳಿ, ಚಿತ್ತಾನಹಳ್ಳಿ, ಕುಂದುವಾಡ, ಕುಕ್ಕವಾಡ, ಕೈದಾಳೆ, ಕೊಳೇನಹಳ್ಳಿ ಸೇರಿದಂತೆ 32 ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ದೊರೆತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. 

ಕಳೆದ ಮೂರು ಹಂಗಾಮಿನಲ್ಲಿ ನೀರು ಇಲ್ಲದ ಕಾರಣದಿಂದ ರೈತರು ಭತ್ತ ನಾಟಿ ಮಾಡಿಲ್ಲ. ತೀವ್ರ ಬರಗಾಲದಿಂದ ಬಿತ್ತಿದ ಬೆಳೆಗಳು ಕೈಗೆ ದೊರೆತಿಲ್ಲ. ಸಾಲ ಮಾಡಿ ಹಾಕಿದ ಬಂಡವಾಳವು ಸಹ ಇಲ್ಲದಾಗಿದೆ. ಈ ಭಾಗದ ರೈತರು ತೀವ್ರ ಸಾಲದ ಸುಳಿಗೆ ಸಿಲುಕಿ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ಈ ಭಾಗಕ್ಕೂ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ನೀರಾವರಿ ಮತ್ತು ಬೆಸ್ಕಾಂ ಅಧಿಕಾರಿಗಳು ಕೇವಲ ನೆಪ ಮಾತ್ರಕ್ಕೆ ಅಕ್ರಮ ಪಂಪ್ ಸೆಟ್ ತೆರವುಗೊಳಿಸುವ ಕಾರ್ಯಚರಣೆ ಮಾಡುತ್ತಿದ್ದಾರೆ. ಆದರೆ ರಾಜಕೀಯ ಪ್ರಭಾವಕ್ಕೀಡಾಗಿ ಪಂಪ್ ಸೆಟ್ ಗಳನ್ನು ರೈತರಿಗೆ ಹಿಂದಿರುಗಿಸಿದ್ದಾರೆ. ಇದರಿಂದ ಮತ್ತೆ ನೀರು ಕದಿಯಲಾಗುತ್ತಿದೆ. ಅಕ್ರಮ ಪಂಪ್ ಸೆಟ್ ಅಳವಡಿಸಿದ ಒಬ್ಬ ರೈತರ ಮೇಲೂ ಕಾನೂನು ಕ್ರಮ ಕೈಗೊಂಡಿಲ್ಲ. ಇನ್ನು ಬೆಸ್ಕಾಂ ಅಧಿಕಾರಿಗಳು ಅಕ್ರಮ ಪಂಪ್ ಸೆಟ್ ಗಳಿಗೆ ಲಂಚ ಪಡೆದು ಅಕ್ರಮವಾಗಿ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಇದಲ್ಲದೆ ಭದ್ರಾ ಕಾಲುವೆಯ ನೀರು ಅಕ್ರಮ ಪಂಪ್ ಸೆಟ್ ಗಳ ಮೂಲಕ ಹೊಳಲ್ಕೆರೆ ತಾಲೂಕಿಗೂ  ಹರಿಯುತ್ತಿದೆ. ಇಂತಹ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಅಧಿಕಾರಿಗಳ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು. 

ರೈತ ಮುಖಂಡರಾದ ಬಿ.ಎಂ.ಸತೀಶ್, ಶಾಂತರಾಜ್, ಲಿಂಗರಾಜ್ ಶಾಮನೂರು, ಕೆ.ಪಿ.ಕಲ್ಲಿಂಗಪ್ಪ, ಧನಂಜಯ ಕಡ್ಲೆಬಾಳು, ಐರಣಿ ಜಯಪ್ಪ, ಸುರೇಶ್, ಗುರುಶಾಂತ್, ವೀರೇಶ್, ಗಣೇಶಪ್ಪ ಕುಂದುವಾಡ, ವಿಶ್ವನಾಥ್, ಹನುಮಂತಪ್ಪ, ಹಾಲಪ್ಪ, ಶಫಿ, ಸಿದ್ದಲಿಂಗಪ್ಪ, ಮುಜಾಹಿದ್ ಸಾಬ್, ಓಂಕಾರಪ್ಪ, ಜಯಪ್ಪ ಸೇರಿದಂತೆ ಹಲವಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News