ನಾಗಮಂಗಲ: ಕುಡಿಯುವ ನೀರಿಗೆ ಪರದಾಟ; ಪುರಸಭೆಗೆ ಬೀಗ ಜಡಿದ ನಾಗರಿಕರು

Update: 2018-02-14 18:08 GMT

ನಾಗಮಂಗಲ, ಫೆ.14: ಒಂದು ವಾರದಿಂದಲೂ ಪಟ್ಟಣದ ನಾಗರಿಕರಿಗೆ ಕುಡಿಯಲು ನೀರು ಬಿಡದೆ ತೊಂದರೆಯಾಗಿದ್ದು, ಈ ದಿನವೇ ನೀರು ಹರಿಸುವಂತೆ ಪಟ್ಟುಹಿಡಿದು ಆಕ್ರೋಶಿತಗೊಂಡ ನಾಗರಿಕರು ಮತ್ತು ಕೆಲವು ಕೌನ್ಸಿಲರ್ ಗಳು ಬುಧವಾರ ಪುರಸಭೆಗೆ ಬೀಗಜಡಿದು ಪ್ರತಿಭಟಿಸಿದರು.

ಇಲ್ಲಿನ ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಕೌನ್ಸಿಲರ್ ಗಳ ನಡುವಿನ ಸಾಮ್ಯತೆ ಕೊರತೆಯಿಂದಾಗಿ ಕುಸಿದಿರುವ ಆಡಳಿತ ವ್ಯವಸ್ಥೆ ವಿರುದ್ದ ಕಳೆದ ವಾರ ಕಛೇರಿಗೆ ಮುತ್ತಿಗೆ ಹಾಕಿ ನಾಗರಿಕರು ಎಚ್ಚರಿಸಿದ್ದರು. ಇದೀಗ ಶಿವರಾತ್ರಿ ಹಬ್ಬಕ್ಕೂ ಜನತೆಗೆ ನೀರಿನ ವ್ಯವಸ್ಥೆ ಮಾಡದ ಪುರಸಭೆ ನಿರ್ಲಕ್ಷ್ಯದ ವಿರುದ್ದ ತಿರುಗಿ ಬಿದ್ದು ಪ್ರತಿಭಟನೆ ನಡೆಸಿದರು. 

ಕಚೇರಿಗೆ ಬೆಳಗ್ಗಿಯೇ ಜಮಾಯಿಸಿದ ನಾಗರಿಕರು ಯಾವೊಬ್ಬ ಕಚೇರಿ ಸಿಬ್ಬಂದಿಯನ್ನೂ ಒಳಹೋಗಲು ಬಿಡದೆ ಬೀಗ ಜಡಿದು ಪುರಸಭೆ ಆಡಳಿತ ವ್ಯವಸ್ಥೆ ಮತ್ತು ಮುಖ್ಯಾಧಿಕಾರಿಗಳ ವಿರುದ್ದ ದಿಕ್ಕಾರ ಕೂಗಿದರು. ಪುರಸಭೆಯಲ್ಲಿ ಜನರ ಯಾವುದೇ ಕೆಲಸಗಳಿಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಒಂದು ವಾರದಿಂದಲೂ ಪಟ್ಟಣಕ್ಕೆ ನೀರು ಬಿಟ್ಟಿಲ್ಲ. ಶಿವರಾತ್ರಿ ಹಬ್ಬಕ್ಕಾದರೂ ನೀರು ಬಿಡುತ್ತಾರೆಂದರೆ ಅದಕ್ಕೂ ಕಿವಿಗೊಡದೆ ತೆಪ್ಪಗಾಗಿದ್ದಾರೆ. ಕುಡಿಯಲು, ಬಟ್ಟೆತೊಳೆಯಲು ಇನ್ನಿತರ ಕೆಲಸಗಳಿಗೆ ನೀರಿಲ್ಲದೆ ಜನರ ಪರದಾಟ ತೀವ್ರವಾಗಿದೆ. ಯಾವಾಗ ಕೇಳಿದರೂ ಮೋಟಾರ್ ಕೆಟ್ಟಿದೆ ಎಂದು ಸಬೂಬು ಹೇಳುತ್ತಾರೆ ಎಂದು ಅವರು ಆರೋಪಿಸಿದರು. ಇನ್ನು ಅಧಿಕಾರಿಗಳು ಜನರ ಕೈಗೆ ಸಿಗುವುದಿಲ್ಲ. ಯಾವಾಗಲೂ ಅಲ್ಲಿ ಸಭೆ, ಇಲ್ಲಿ ಸಭೆಯೆಂದು ನೆಪ ಮಾಡಿಕೊಂಡು ಕಛೇರಿಯಲ್ಲೆ ಇರುವುದಿಲ್ಲ. ಇವರಿಗೆ ಜನರ ಸಮಸ್ಯೆ ಬೇಕಿಲ್ಲ, ಜನಪ್ರತಿನಿಧಿಗಳಿಗಾದರೂ ಈ ಬಗ್ಗೆ ಕಾಳಜಿಯಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಕಛೇರಿಗೆ ಬಾರದ ಅಧ್ಯಕ್ಷ, ಮುಖ್ಯಾಧಿಕಾರಿ: ಪ್ರತಿಭಟನಾಕಾರರು ಕಛೇರಿಗೆ ಬೀಗ ಜಡಿದ ವಿಷಯ ತಿಳಿದರೂ ಪುರಸಭೆ ಅಧ್ಯಕ್ಷ ವಿಜಯ್‍ಕುಮಾರ್ ಸ್ಥಳಕ್ಕೆ ಬಂದಿರಲಿಲ್ಲ ಹಾಗೂ ಮುಖ್ಯಾಧಿಕಾರಿ ರವಿಕುಮಾರ್ ಸಹ ಮಂಡ್ಯದಲ್ಲಿ ಸಭೆ ಇದೆ ಎಂದು ಸಂರ್ಕಿಸಿದವರಿಗೆ ಉತ್ತರಿಸಿ ನುಣುಚಿಕೊಂಡು ಕಚೇರಿ ಕಡೆ ಸುಳಿಯಲಿಲ್ಲ. ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಕೆಟ್ಟಿರುವ ಮೋಟಾರು ಸರಿಪಡಿಸಿ ಮದ್ಯಾಹ್ನ 1 ಗಂಟೆಯೊಳಗೆ ನೀರು ಹರಿಸಿದರು.  

ಸ್ಥಳಕ್ಕೆ ಆಗಮಿಸಿದ ಸಿಪಿಐ ಧನರಾಜ್ ಮತ್ತು ಪಟ್ಟಣ ಠಾಣೆ ಪಿಎಸ್‍ಐ ಚಂದ್ರಶೇಖರ್ ಪ್ರತಿಭಟನಾಕಾರರ ಮನವೊಲಿಸಿ ಕಚೇರಿ ಬೀಗ ತೆಗೆಸಿದ ನಂತರವೇ ಸಿಬ್ಬಂದಿ ವರ್ಗ ಕಚೇರಿಯ ಒಳ ಹೋಗುವಂತಾಯಿತು.

ಪ್ರತಿಭಟನೆಯಲ್ಲಿ ಪುರಸಭೆ ಉಪಾಧ್ಯಕ್ಷ ಚಂದ್ರು, ಸ್ಥಾಯಿಸಮಿತಿ ಅಧ್ಯಕ್ಷ ರಾಜು, ಮಾ.ಅಧ್ಯಕ್ಷ ಮತ್ತು ಹಾಲಿ ಸದಸ್ಯ ಜಯಣ್ಣ, ಗೀರಿಶ್, ಅನ್ಸರ್, ಮುಖಂಡರಾದ ಆಸಿಫ್, ಹರೀಶ್, ಮಹೇಶ್, ರವಿ, ಸುರೇಶ್, ಮೂರ್ತಿ ಹಾಗೂ ಮಹಿಳೆಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News