ಸ್ವಚ್ಛತೆ ಕಾಪಾಡಲು ನಾಗರಿಕರ ಸಹಕಾರ ಅಗತ್ಯ: ಎಂ.ಎಸ್.ಆತ್ಮಾನಂದ

Update: 2018-02-14 18:11 GMT

ಮಂಡ್ಯ, ಫೆ.14: ಸ್ವಚ್ಛ ಭಾರತದ ಸರ್ವೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾಗರಿಕರ ಸಹಕಾರ ಅಗತ್ಯವಿದ್ದು, ಸ್ವಚ್ಛತೆಯಲ್ಲಿ ಮಂಡ್ಯ ನಗರ ಪಡೆದಿರುವ ರಾಷ್ಟ್ರಮಟ್ಟದ ಸ್ಥಾನ ಉಳಿಸಿಕೊಳ್ಳಲು ಸಹಕರಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ ಮನವಿ ಮಾಡಿದ್ದಾರೆ. 

ನಗರದ 17ನೆ ವಾರ್ಡ್ ಹೌಸಿಂಗ್ ಬೋರ್ಡ್‍ನ ಎಂ.ಲಿಂಗಯ್ಯ ಉದ್ಯಾನವನದಲ್ಲಿ ನಗರಸಭೆ ಅನುದಾನದ 5 ಲಕ್ಷ ರೂ. ವೆಚ್ಚದಲ್ಲಿ ಕಲ್ಲು ಬೆಂಚು ಮತ್ತು ಪಾರ್ಕ್ ಲೈಟಿಂಗ್‍ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರ, ನಗರಸಭೆ ಅನುದಾನದಿಂದ ಅನೇಕ ಉದ್ಯಾನವನಗಳು ಅಭಿವೃದ್ಧಿಯಾಗುತ್ತಿದೆ. ಮಾನವನ ಆರೋಗ್ಯಕ್ಕೆ ಶುದ್ಧ ಗಾಳಿ, ಬೆಳಕು, ನೀರು ಅಗತ್ಯ. ಈ ನಿಟ್ಟಿನಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದರು. ಉದ್ಯಾನವನಗಳ ಅಭಿವೃದ್ಧಿಗೆ ನಗರಸಭೆ ಹೆಚ್ಚು ಅನುದಾನವನ್ನು ಮೀಸಲಿಡಬೇಕು. ಸಂಚಾರ ವ್ಯವಸ್ಥೆಗೆ ಆದ್ಯತೆ ಕೊಡಬೇಕು. ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮಲ್ಟಿಲೆವೆಲ್ ಪಾರ್ಕ್ ಅನ್ನು ನಗರದಲ್ಲಿ ನಿರ್ಮಿಸಬೇಕು ಎಂದು ಅವರು ಸಲಹೆ ನೀಡಿದರು.

ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುವ ಕಾರಣ ಸೂಕ್ಷ್ಮ ಪ್ರದೇಶಗಳಲ್ಲಿ ಸಾರ್ವಜನಿಕರು ರಸ್ತೆ ದಾಟಲು ಪರದಾಡುವಂತಹ  ವಾತಾವರಣ ನಿರ್ಮಾಣವಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಆಯವ್ಯಯದಲ್ಲಿ ಹೆಚ್ಚು ಅನುದಾನ ನೀಡಬೇಕು ಎಂದು ಹೇಳಿದರು. 

ನಗರಸಭಾಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಉಪಾಧ್ಯಕ್ಷ ಸುಜಾತಮಣಿ, ಸದಸ್ಯ ಬಿ.ಪಿ. ಪ್ರಕಾಶ್, ಮಾಜಿ ಉಪಾಧ್ಯಕ್ಷೆ ಗೌರಮ್ಮ, ಸಮಾಜ ಸೇವಕ ಗಣಿಗ ರವಿಕುಮಾರ್, ನಗರ ಬಿಜೆಪಿ ಅಧ್ಯಕ್ಷ ಅರವಿಂದ್, ಕೃಷ್ಣ, ಕೆಂಪರಾಜು, ಶಾರದ ರಮೇಶರಾಜು, ಬಿ.ಎಂ.ಅಪ್ಪಾಜಪ್ಪ, ವಿವೇಕ್, ಇತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News