ಹೊನ್ನಾವರ : ಹಸುವಿನ ದಾಳಿಯಿಂದ ತಮ್ಮನನ್ನು ಬಚಾವ್ ಮಾಡಿದ ಬಾಲಕಿ!

Update: 2018-02-15 09:11 GMT

ಕಾರವಾರ, ಫೆ.15:ಎಂಟರ ಹರೆಯದ ಬಾಲಕಿಯೊಬ್ಬಳು ಸಮಯ ಪ್ರಜ್ಞೆ ಮೆರೆದು ತನ್ನ ಎರಡರ ಹರೆಯದ ತಮ್ಮನನ್ನು ಹಸುವಿನ ದಾಳಿಯಿಂದ ರಕ್ಷಿಸಿರುವ ಘಟನೆ ಕಾರವಾರ ಜಿಲ್ಲೆಯ ಹೊನ್ನಾವರ ತಾಲೂಕಿನ ನವಿಲಾಗಾಂವ್‌ನಲ್ಲಿ ನಡೆದಿದೆ. ಮಂಗಳವಾರ ನಡೆದ ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಾಲಕಿಯ ಈ ಸಾಹಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಎಲ್‌ಐಸಿ ಏಜೆಂಟ್ ಹಾಗೂ ಜ್ಯುವೆಲ್ಲರಿ ಕಿರಣ್ ಶೇಟ್‌ರ ಪುತ್ರಿ ಆರತಿ ಮಂಗಳವಾರ ಶಿವರಾತ್ರಿ ನಿಮಿತ್ತ ಶಾಲೆಗೆ ರಜೆಯಿದ್ದ ಕಾರಣ  ಮನೆಯ ಎದುರುಗಡೆ ತಮ್ಮ ಕಾರ್ತಿಕ್‌ನನ್ನು ಚಿಕ್ಕ ಸೈಕಲಿನಲ್ಲಿ ಕುಳ್ಳಿರಿಸಿಕೊಂಡು ಆಡುತ್ತಿದ್ದಳು. ಆಗ ತಮ್ಮತ್ತ ಓಡಿಬಂದ ಹಸುವನ್ನು ಗಮನಿಸಿದ ಆರತಿ ತಕ್ಷಣವೇ ತಮ್ಮನನ್ನು ಸೈಕಲಿನಿಂದ ಇಳಿಸಿಕೊಂಡು ಒಂದು ಮೂಲೆಗೆ ಓಡಿದಳು. ಹಸು ಕೆಂಪುಬಣ್ಣದ ಅಂಗಿ ತೊಟ್ಟಿದ್ದ ಬಾಲಕನನ್ನು ಕೋಡಿನಿಂದ ತಿವಿಯಲು ಯತ್ನಿಸಿತು. ಆಗ ತನ್ನ ತಮ್ಮನನ್ನು ಗಟ್ಟಿಯಾಗಿ ಹಿಡಿದುಕೊಂಡ ಬಾಲಕಿ ಸಹಾಯಕ್ಕಾಗಿ ಮನೆಯವರನ್ನು ಕರೆದರು. ತಕ್ಷಣವೇ ಕುಟುಂಬ ಸದಸ್ಯರು ಅಲ್ಲಿಗೆ ಆಗಮಿಸಿ ದನವನ್ನು ಸ್ಥಳದಿಂದ ಓಡಿಸಿದರು.

ಬಾಲಕಿಯೊಬ್ಬಳು ದನದ ದಾಳಿಯಿಂದ ತಮ್ಮನನ್ನು ರಕ್ಷಿಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದನ್ನು ನೋಡಿದ ಹೆತ್ತವರು ಮಗಳ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ‘‘ನನಗೆ ಯೋಚಿಸಲು ಸಮಯವಿರಲಿಲ್ಲ. ಆ ಕ್ಷಣದಲ್ಲಿ ತಮ್ಮನನ್ನು ಕಾಪಾಡುವುದು ನನ್ನ ಉದ್ದೇಶವಾಗಿತ್ತು. ದೇವರ ದಯೆಯಿಂದ ನಾವು ಗಾಯಗೊಳ್ಳದೇ ಬಚಾವಾದೆವು’’ ಎಂದು ಬಾಲಕಿ ಆರತಿ ಪ್ರತಿಕ್ರಿಯಿಸಿಳು.

 ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಆರತಿಯ ತಾಯಿ ಆಶಾ,‘‘ಬಾಲಕಿಯರು ಬಾಲಕರಿಗಿಂತ ಕಡಿಮೆಯೇನಲ್ಲ ಎನ್ನುವುದನ್ನು ಈ ಘಟನೆ ತೋರಿಸುತ್ತದೆ. ಆರಂಭದಲ್ಲಿ ನಮಗೆ ಘಟನೆಯ ಬಗ್ಗೆ ಗಂಭೀರತೆ ಗೊತ್ತಾಗಲಿಲ್ಲ. ಸಿಸಿಟಿವಿ ದೃಶ್ಯ ನೋಡಿದ ಮೇಲೆಯೇ ಆರತಿಯ ಸಾಹಸದ ಬಗ್ಗೆ ನಮಗೆ ಗೊತ್ತಾಯಿತು. ಆರತಿ ಸಮಯ ಪ್ರಜ್ಞೆ ಮೆರೆಯದೇ ಇರುತ್ತಿದ್ದರೆ, ಕಾರ್ತಿಕ್‌ನ ಜೀವಕ್ಕೆ ಅಪಾಯವಾಗುತ್ತಿತ್ತು’’ ಎಂದರು.

ಸ್ಥಳೀಯರು ಹಾಗೂ ಆರತಿಯ ಟೀಚರ್‌ಗಳು ಆರತಿಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News