ಕಾವೇರಿ ವಿವಾದ: ಫೆ.16 ರಂದು ಸುಪ್ರೀಂ ಅಂತಿಮ ತೀರ್ಪು

Update: 2018-02-15 15:17 GMT

ಹೊಸದಿಲ್ಲಿ, ಫೆ.15: ಕಾವೇರಿ ನದೀ ನೀರು ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್‌ನ ಅಂತಿಮ ತೀರ್ಪು ಶುಕ್ರವಾರ (ಫೆ.16 ರಂದು) ಪ್ರಕಟವಾಗಲಿದೆ. 2007ರಲ್ಲಿ ಕಾವೇರಿ ನೀರು ವಿವಾದ ನ್ಯಾಯಾಧೀಕರಣ ಜಲ ಹಂಚಿಕೆ ಮಾಡಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳು ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದವು.

ಸುದೀರ್ಘ ವಿಚಾರಣೆಯ ಬಳಿಕ 2017ರ ಸೆ.20ರಂದು ಹೇಳಿಕೆ ನೀಡಿದ್ದ ಸುಪ್ರೀಂಕೋರ್ಟ್‌ನ ಮೂವರು ಸದಸ್ಯರ ನ್ಯಾಯಪೀಠ, ಕಳೆದ ಹಲವು ದಶಕಗಳಿಂದ ಈ ವಿಷಯದಲ್ಲಿ ಮೂಡಿಸಿರುವ ಗೊಂದಲಕ್ಕೆ ತೆರೆ ಎಳೆಯುತ್ತಿದ್ದು ತಿಂಗಳೊಳಗೆ ತೀರ್ಪು ನೀಡಲಾಗುವುದು ಎಂದು ತಿಳಿಸಿತ್ತು. ನೀರು ಹಂಚಿಕೆಗೆ ಕೇಂದ್ರ ಸರಕಾರ ರೂಪಿಸಿರುವ ಸೂತ್ರದ ಅನ್ವಯ ಈ ವಿಷಯವನ್ನು ಬಗೆಹರಿಸಬೇಕು ಮತ್ತು ಕಾನೂನನ್ನು ಸಂಸತ್‌ನ ಉಭಯ ಸದನಗಳು ಅನುಮೋದಿಸಬೇಕು ಎಂದು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಕೋರಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಕಾವೇರಿ ನದಿ ನೀರನ್ನು ಕುಡಿಯಲು ಮಾತ್ರವಲ್ಲದೆ ಕೃಷಿ ಕಾರ್ಯಕ್ಕೂ ಬಳಸಲಾಗುವ ಕಾರಣ ನದಿ ನೀರಿನ ಹಂಚಿಕೆ ವಿಷಯದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯೆ ಸುದೀರ್ಘ ಅವಧಿಯಿಂದಲೂ ವಿವಾದವಿದೆ. ಕೇರಳ ಮತ್ತು ಪುದುಚೇರಿಗಳು ಕೂಡಾ ಈ ವಿವಾದದಲ್ಲಿ ಒಳಗೊಂಡಿವೆ.

ಕರ್ನಾಟಕ-ತಮಿಳುನಾಡು ನಡುವಿನ ನೀರು ಹಂಚಿಕೆ ವಿವಾದ ಬಗೆಹರಿಸಲು ಮೇ 1990ರಲ್ಲಿ ಕಾವೇರಿ ಜಲ ವಿವಾದ ನ್ಯಾಯಾಧೀಕರಣವನ್ನು ಸ್ಥಾಪಿಸಲಾಗಿತ್ತು. 1991ರಲ್ಲಿ ಮಧ್ಯಂತರ ಆದೇಶ ನೀಡಿದ್ದ ನ್ಯಾಯಾಧೀಕರಣ, ಪ್ರತೀ ವರ್ಷ ತಮಿಳುನಾಡಿಗೆ 205 ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಿದ್ದು ಈ ಬಗ್ಗೆ ರಾಜ್ಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು ಹಿಂಸಾಚಾರ ಕೂಡಾ ನಡೆದಿತ್ತು. ಆದರೆ ಕಾವೇರಿ ನದೀಪಾತ್ರದಲ್ಲಿ ನೀರಿನ ಕೊರತೆಯ ಕಾರಣ 2007ರವರೆಗೆ ಕರ್ನಾಟಕ ನಿಗದಿತ ಪ್ರಮಾಣಕ್ಕಿಂತ ಕಡಿಮೆ ನೀರನ್ನು ಬಿಡುಗಡೆ ಮಾಡಿತ್ತು.

2007ರಲ್ಲಿ ಅಂತಿಮ ಆದೇಶ ಪ್ರಕಟಿಸಿದ್ದ ನ್ಯಾಯಾಧೀಕರಣ ನದಿ ನೀರು ಹಂಚಿಕೆಗೆ ಸೂತ್ರವೊಂದನ್ನು ಸೂಚಿಸಿತ್ತು. ಅದರಂತೆ ತಮಿಳುನಾಡಿಗೆ- 419 ಟಿಎಂಸಿ ಅಡಿ, ಕರ್ನಾಟಕಕ್ಕೆ 270 ಟಿಎಂಸಿ ಅಡಿ, ಕೇರಳಕ್ಕೆ 30 ಟಿಎಂಸಿ ಅಡಿ ಹಾಗೂ ಪುದುಚೇರಿಗೆ 7 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲು ಸೂಚಿಸಿತ್ತು. 2013ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ಅಂದಿನ ಯುಪಿಎ ಸರಕಾರ ಕಾವೇರಿ ನದಿ ನೀರು ವಿವಾದ ನ್ಯಾಯಾಧೀಕರಣದ ಅಂತಿಮ ಆದೇಶವನ್ನು ಅನುಷ್ಠಾನಗೊಳಿಸಿ ಅಧಿಸೂಚನೆ ಪ್ರಕಟಿಸಿತ್ತು. ಕರ್ನಾಟಕದ ಕೊಡಗಿನಲ್ಲಿ ಹುಟ್ಟುವ ಕಾವೇರಿ ನದಿ ಹಾಸನ, ಮಂಡ್ಯ, ಮೈಸೂರಿನ ಮೂಲಕ ಹರಿದು ಬಳಿಕ ತಮಿಳುನಾಡಿನ ಧರ್ಮಪುರಿ, ಇರೋಡ್, ತಂಜಾವೂರು ಮತ್ತಿತರ ಜಿಲ್ಲೆಗಳ ಮೂಲಕ ಸಾಗುತ್ತದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಕಾವೇರಿ ನದಿಯಿಂದಲೇ ದೊರೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News