ಇದು ತಪ್ಪು ತಿಳುವಳಿಕೆ

Update: 2018-02-15 18:32 GMT

ಭಾಗ - 2

‘ಹಾಥಿ ಚಲ್‌ತಾ ಹೈ ಕುತ್ತಾ ಭೋಂಕ್ತಾ ಹೈ’ ಅನ್ನುವ ದಿಮಾಕನ್ನಿಟ್ಟುಕೊಂಡು ಬದುಕುವುದು ಸಾಧ್ಯವಿಲ್ಲ ಅಂದುಕೊಂಡೇ ತಾ. 3.5.1927ರ ಸಂಚಿಕೆಯಲ್ಲಿ ‘ಕೇಸರಿ’ಯು ತಮ್ಮ ಸ್ಫುಟವಾದ ಸೂಚನೆಯಲ್ಲಿ ಮಹಾಡ್‌ನ ನೀರಿನ ಪ್ರಕರಣದ ಬಗ್ಗೆ ತಮ್ಮ ವಿಚಾರಗಳನ್ನು ಪ್ರಕಟಿಸಿದೆ. ಅಸ್ಪಶ್ಯತಾ ನಿವಾರಣೆ ಮಂಡಳಿಯ ಮಾಟೆ ಮಾಸ್ತರರು ಹಾಗೂ ಹಿಂದೂ ಮಹಾಸಭೆಯ ಸಾತೆಯವರು ವಿಚಾರಣೆ ನಡೆಸಿ ‘ಕೇಸರಿ’ಗೆ ಕೊಟ್ಟ ಮಾಹಿತಿಯ ಮೇಲೆ ‘ಕೇಸರಿ’ಯು, ದಂಗೆಯಲ್ಲಿ ಬ್ರಾಹ್ಮಣೇತರರು ಭಾಗವಹಿಸಿದ್ದರು. ಶೇಟಜಿ-ಭಡಜಿಗಳು ದಂಗೆಯಲ್ಲೆಂದೂ ಭಾಗವಹಿಸಲೇ ಇಲ್ಲ, ಆದರೆ ಸಭೆಯ ಮೊದಲು ಹಾಗೂ ದಂಗೆಯ ನಂತರ ಅವರು ದಲಿತರಿಗೆ ಸಹಾಯ ಮಾಡಿದರು ಎಂದು ಬರೆದದ್ದಲ್ಲದೆ ಶೇಟಜಿ-ಭಡಜಿಗಳನ್ನು ಬಯ್ಯುವ ದಲಿತರು ದಾರಿ ತಪ್ಪಬಾರದು ಅನ್ನುವ ಜಾಣತನದ ಸಲಹೆಯನ್ನೂ ಕೊಟ್ಟಿದೆ. ಶೇಟಜಿ-ಭಡಜಿಗಳು ದಂಗೆಯಲ್ಲಿ ಭಾಗವಹಿಸಲಿಲ್ಲ, ಬದಲಿಗೆ ಬ್ರಾಹ್ಮಣೇತರರು ಭಾಗವಹಿಸಿದರು ಅನ್ನುವುದನ್ನು ನಿಜ ಎಂದಿಟ್ಟುಕೊಂಡರೂ, ಅದರ ಬಗ್ಗೆ ‘ಕೇಸರಿ’ ಹೇಳಿರುವುದಾದರೂ ಏನನ್ನು? ಬ್ರಾಹ್ಮಣೇತರರಿಗೆ ಬುದ್ಧಿ ಹೇಳಿದೆಯೇ? ಇಲ್ಲ.

ಅಸ್ಪಶ್ಯತಾ ನಿವಾರಣೆಗಾಗಿ ಉಪಾಯವನ್ನು ಸೂಚಿಸಿದೆಯೇ? ಇಲ್ಲ. ಇಂತಹ ದೊಡ್ಡ ಪ್ರಶ್ನೆಯ ಬಗ್ಗೆ ಬರೆಯುವಾಗ ಕೇಸರಿಯು ಜನರ ಕಣ್ಣಿನಲ್ಲಿ ಉರಿಯುವ ಅಂಜನವನ್ನು ಹಾಕಬೇಕಿತ್ತು. ಬದಲಾಗಿರುವ ಮನುವಿನಲ್ಲಿ ನಾವು ಹೇಗಿರಬೇಕು ಅನ್ನುವುದರ ಬಗ್ಗೆ ಖುಲಾಸೆ ಮಾಡಿ ತಿಳುವಳಿಕೆಯಿಲ್ಲದ ಜನತೆಗೆ ತಿಳಿಯಹೇಳಬೇಕಿತ್ತು. ಆದರೆ ಅವರ ಬರವಣಿಗೆಯಲ್ಲಿ ಉದಾರ ಕಲ್ಪನೆಯ ಸುಳಿವು ಎಲ್ಲೂ ಇಲ್ಲ. ಅವರ ಬರವಣಿಗೆಯು ಅವರ ಸಣ್ಣತನ ತೋರಿಸುತ್ತದೆ. ಅದರಲ್ಲಿ ಶೇಟಜಿ-ಭಡಜಿಯವರ ಪರ ವಹಿಸಿಕೊಳ್ಳುವ ಕ್ಷುದ್ರ ಬುದ್ಧಿ ಕಾಣಿಸುತ್ತದೆ. ಅಷ್ಟೇ ಅಲ್ಲ ಶುದ್ಧ ಜಗಳ ಹಚ್ಚುವ ಕೆಲಸ ಮಾಡಿದ್ದಾರೆ ಕೇಸರಿಯವರು. ಹೀಗೇಕೆ ಎಂದು ಪರೀಕ್ಷಣೆ ನಡೆಸಿದಾಗ ಶುದ್ಧ ಜಗಳ ಹಚ್ಚುವ ಕೆಲಸ ಮಾಡಿದ್ದಾರೆ ಕೇಸರಿಯವರು. ಹೀಗೇಕೆ ಎಂದು ಪರೀಕ್ಷಣೆ ನಡೆಸಿದಾಗ ಸೌತ್ ಆಫ್ರಿಕಾದ ಬಿಳಿ ಜನರಿಗೆ ಅಸ್ಪಶ್ಯತೆ ನಿವಾರಣೆಯ ಬಗ್ಗೆಯಿರುವ ತುಡಿತಕ್ಕಿಂತ ಹೆಚ್ಚು ತುಡಿತ ‘ಕೇಸರಿ’ಗಿಲ್ಲ ಅನ್ನುವುದು ಗೊತ್ತಾಗುತ್ತದೆ. ಇಬ್ಬರಿಗೂ ಅಸ್ಪಶ್ಯತೆ ನಿವಾರಣೆ ಬೇಕಿಲ್ಲ. ತಮ್ಮ ಸ್ವಾರ್ಥ ಧೋರಣೆಗೆ ಒಂದು ಕಾರಣವನ್ನಿಟ್ಟುಕೊಳ್ಳಲು ಆದಷ್ಟು ಅದನ್ನು ಜೋಪಾನಮಾಡುವೆಡೆಯೇ ಇವರ ಗಮನವಿದೆ! ಭಾರತೀಯರು ಸಮಾನ ಹಕ್ಕುಗಳನ್ನು ಕೇಳಿದ ಕೂಡಲೇ ಅಲ್ಲಿ ಸೌತ್ ಆಫ್ರಿಕಾದಲ್ಲಿ ಬಿಳಿ ಜನರು ಅಸ್ಪಶ್ಯತೆಯ, ಅನ್ಯಾಯದ ವಿಷಯವನ್ನೆತ್ತುತ್ತಾರೆ! ಹಾಗೆಯೇ ಬ್ರಾಹ್ಮಣೇತರರು ಬ್ರಾಹ್ಮಣರಲ್ಲಿ ಸಮಾನ ಹಕ್ಕು ಕೇಳಿದೊಡನೆ, ‘ಕೇಸರಿ’ ದಲಿತರನ್ನು ವಿರೋಧಿಸುವಾಗ ನಿಮಗೆ ನಮ್ಮ ಸರಿಸಮಾನ ಹಕ್ಕು ಕೇಳುವ ಅಧಿಕಾರವೇನು? ಅನ್ನುವ ಪ್ರಶ್ನೆಯನ್ನು ಕೇಳಿದ್ದಾರೆ!

ಬ್ರಾಹ್ಮಣೇತರರ ಕಾರಣ ಹೇಳಿ ‘ಕೇಸರಿ’ಯ ಇಡೀ ಗುಂಪಿಗೆ ಅಸ್ಪಶ್ಯತೆ ನಿವಾರಣೆಯ ವಿಷಯದಲ್ಲಿ ತಮ್ಮ ಕರ್ತವ್ಯವನ್ನು ತಪ್ಪಿಸುವ ಒಂದು ಸರಳ ಉಪಾಯ ಸಿಕ್ಕಿದೆ ಅನ್ನುವುದು ಅನುಭವದಿಂದ ಗೊತ್ತಾಗಿದೆ. ದಿವೇಕರ್ ಶಾಸ್ತ್ರಿಗಳಂತಹ ಜನ, ದಲಿತರನ್ನು ನೀರಿನ ಸ್ಥಳಗಳಲ್ಲಿ ಹಾಗೂ ದೇವಸ್ಥಾನದಲ್ಲಿ ಕರೆಸಿಕೊಳ್ಳಲು ನಮ್ಮ ಬ್ರಾಹ್ಮಣರ ಅಭ್ಯಂತರವಿಲ್ಲ. ಆದರೆ ಬ್ರಾಹ್ಮಣೇತರರಿಗೆ ಅದು ನಡೆಯುವುದಿಲ್ಲ, ಹಿಂದೂ ಸಮಾಜದಲ್ಲಿ ಜನರ ಸಂಖ್ಯೆ ಹೆಚ್ಚಲೆಂದೇ ದಲಿತರನ್ನು ಹತ್ತಿರಮಾಡಬೇಕು, ಅದರೆ ಅವರಂತಹ ಅಲ್ಪಸಂಖ್ಯೆಯಲ್ಲಿರುವ ಜನರನ್ನು ಹತ್ತಿರ ಮಾಡಿದರೆ ಬ್ರಾಹ್ಮಣೇತರರಂತಹ ಬಹುಸಂಖ್ಯೆಯಲ್ಲಿರುವ ಜನ ಒಡೆದು ಹಿಂದೂ ಸಮಾಜದ ಹೊರಗೆ ಹೋಗಬಹುದು! ಆಗ ‘‘ನಾವು ದಲಿತರನ್ನು ಹತ್ತಿರ ಮಾಡಿ ಫಲವೇನು?’’ ಅನ್ನುತ್ತಾರೆ. ‘ಕೇಸರಿ’ಯು ನಿಮ್ಮನ್ನು ನಾವು ಹತ್ತಿರಮಾಡಲು ಸಿದ್ಧ, ನಿಮ್ಮ ಶತ್ರುಗಳು ಬ್ರಾಹ್ಮಣೇತರರು, ಅವರೊಡನೆ ನಿಮಗೆ ಎಷ್ಟು ಜನ ಜಗಳವಾಡುವುದಿದೆಯೋ ಮಾಡಿ ನಮಗೇನು ಹೇಳುತ್ತೀರಿ? ಅನ್ನುತ್ತದೆ.

ಬ್ರಾಹ್ಮಣೇತರರು ಒಂದು ರೀತಿಯ ಬೆದರು ಬೊಂಬೆಗಳು ಅಷ್ಟೇ, ಏನನ್ನೂ ಮಾಡದವರು ಇಂತಹದ್ದನ್ನು ಮಾಡುತ್ತಾರೆ. ಆದರೆ ನಿಜವಾಗಿಯೂ ಕೆಲಸ ಮಾಡುವ ಮನಸ್ಸಿರುವವರಿಗೆ ಯಾವುದೂ ಉತ್ಸವದ ವೇಳೆ (ಬದಲಾಪುರ್ ಜಿಲ್ಲೆಯ ಠಾಣೆಯಲ್ಲಿ 3 ಮೇ 1927ರ ತ್ರಿಶತ್ ಸಾಂವತ್ಸರಿಕ ಶ್ರೀ ಶಿವಾಜಿ ಉತ್ಸವವನ್ನು ಬಾಬಾಸಾಹೇಬ್ ಅಂಬೇಡ್ಕರರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಘಂಟೆ ಅತ್ಯಂತ ಪರಿಣಾಮಕಾರಿಯಾದ ಭಾಷಣ ಮಾಡಿದರು. ಕಡೆಗೆ ಅವರು, ‘‘ಯಾವ ಶಿವಾಜಿಯು ತನ್ನ ಲೋಕೋತ್ತರ ಗುಣಗಳ ಮೇಲೆ ರಾಜ್ಯವನ್ನು ಪಡೆದನೋ ಆತನ ಆ ರಾಜ್ಯ ಚಿರಕಾಲ ಉಳಿಯಲಿಲ್ಲವೇಕೆ? ಅನ್ನುವುದಕ್ಕೆ ಕಾರಣ ಒಂದೇ. ಆ ರಾಜ್ಯದ ಅಭಿಮಾನ ಎಲ್ಲರಿಗೂ ಒಂದೇ ರೀತಿಯಾಗಿರಲಿಲ್ಲ. ಒಬ್ಬ ರಾಜ ಹೋದ ಮೇಲೆ ಮತ್ತೊಬ್ಬ ಬಂದರೂ ಜನರ ದೈನಂದಿನ ವ್ಯವಹಾರದಲ್ಲಿ ಯಾವುದೇ ವ್ಯತ್ಯಾಸವಾಗುತ್ತಿರಲಿಲ್ಲ’’) ಒಬ್ಬ ಸಾಧಾರಣ ಭಿಕ್ಷುಕ ತೋರಿಸಿಕೊಟ್ಟನು. ಬದಲಾಪುರ್‌ದಲ್ಲಿ ಹಿಂದೂ ಮುಸಲ್ಮಾನರ ನಡುವೆ ವೈಮನಸ್ಯವುಂಟಾಗಿದೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೆ. ಹಾಗಾಗಿ ಅಲ್ಲಿಯ ಹಿಂದೂ ಸಮಾಜದಲ್ಲಿ ಒಗ್ಗಟ್ಟುಂಟಾಗಿ ದಲಿತರು ಮೇಲ್ಜಾತಿಯವರು ಅನ್ನುವ ಭೇದಗಳನ್ನು ಅಳಿಸಿಹಾಕುವಂತಾಗಲು ಈ ಉತ್ಸವವನ್ನು ಬೇಕೆಂದೇ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಸಬೇಕು ಎಂದು ಸ್ಥಳೀಯ ಹಿಂದೂ ನೇತಾರರು ನಿರ್ಧರಿಸಿ ಅದರ ಕೆಲಸವನ್ನು ಬದಲಾಪೂರಿನ ಪಾಲೇಯ ಶಾಸ್ತ್ರೀಯವರಿಗೆ ವಹಿಸಿದರು. ಆದರೆ ಡಾ.ಅಂಬೇಡ್ಕರ್ ಅವರನ್ನು ಎಲ್ಲಿ ಉಳಿಸಿಕೊಳ್ಳುವುದು ಅನ್ನುವುದೊಂದು ದೊಡ್ಡ ಪ್ರಶ್ನೆಯಾಗಿತ್ತು. ಅವರ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಅಲ್ಲಿಯ ಒಬ್ಬ ಪ್ರಮುಖ ವ್ಯಕ್ತಿ ಆಶ್ವಾಸನೆ ಕೊಟ್ಟ ಎಂದು ಹೇಳುತ್ತಾರೆ. ಆದರೆ ಕಡೆಗೆ ಪಾಲೇಯ ಶಾಸ್ತ್ರಿಯವರ ಮೇಲೆಯೇ ಈ ಜವಾಬ್ದಾರಿ ಬಂದಿತು. ಆ ಜವಾಬ್ದಾರಿಯನ್ನು ಹೊರುವಾಗ ಪಾಲೇಯ ಶಾಸ್ತ್ರಿಗಳು ತೋರಿದ ಧೈರ್ಯ ಹೊಗಳುವಂತಹದೆ.

ಡಾ. ಅಂಬೇಡ್ಕರ್ ಅವರನ್ನು ತನ್ನ ಮನೆಯಲ್ಲಿರಿಸಿದರೆ ತನ್ನ ಭಿಕ್ಷೆಯ ವ್ಯವಸಾಯದ ಮೇಲೆ ಯಾವ ಪರಿಣಾಮವಾಗಬಹುದು ಎನ್ನುವುದವರಿಗೆ ಗೊತ್ತಿತ್ತು. ಅಲ್ಲದೆ ತನ್ನ ಪ್ರತಿಸ್ಪರ್ಧಿಗಳಾದ ಚಿತ್ಪಾವನ ಭಿಕ್ಷುಕರು ಬ್ರಾಹ್ಮಣೇತರರಾದಂತಹ ತಿಳುವಳಿಕೆಯಿಲ್ಲದ ಯಜಮಾನರಿಗೆ ನಿಮ್ಮ ಭಿಕ್ಷುಕ ಭ್ರಷ್ಟನಾದ ಎಂದು ಹೇಳಲೂ ಹೇಸದವರು ಅನ್ನುವುದನ್ನವರು ತಿಳಿದಿದ್ದರು. ಆಗ ಅವರು ತಮ್ಮ ಹತ್ತಿಪ್ಪತ್ತು ಊರಿನ ಯಜಮಾನರನ್ನು ಕರೆಯಿಸಿ ನಾನು ಅಂಬೇಡ್ಕರರನ್ನು ನನ್ನ ಮನೆಯಲ್ಲಿಟ್ಟು ಆತಿಥ್ಯ ಮಾಡಿದರೆ ನಿಮಗೆ ತೊಂದರೆಯಿದೆಯೇ? ಎಂದು ಕೇಳಿದರು. ಅದಕ್ಕೆ ಸೇರಿದ್ದ ಬ್ರಾಹ್ಮಣೇತರರು ‘‘ನೀವೆಲ್ಲೋ ನಾವಲ್ಲಿ. ನಿಮಗೆ ತೊಂದರೆ ಇಲ್ಲವೆಂದ ಮೇಲೆ ನಮಗೂ ತೊಂದರೆಯಿಲ್ಲ’’ ಎಂದು ಹೇಳಿದರು. ಹೀಗೆ ತಮ್ಮ ಅಧಿಕಾರವನ್ನು ಉಪಯೋಗಿಸುತ್ತ ಒಬ್ಬ ಕರ್ಮಠ ಬ್ರಾಹ್ಮಣನು ದಲಿತನೊಂದಿಗೆ ತಮ್ಮ ಮನೆಯಲ್ಲಿ ಸಹಭೋಜನ ಮಾಡಿದನು. ಹಾಗೂ ಬ್ರಾಹ್ಮಣರು ಬ್ರಾಹ್ಮಣೇತರರಿಗೆ ತಿಳಿಹೇಳಿದರೆ ಬ್ರಾಹ್ಮಣೇತರರು ಯಾವುದಕ್ಕೂ ಅಡ್ಡಬರುವುದಿಲ್ಲ ಅನ್ನುವುದನ್ನು ಸಿದ್ಧಮಾಡಿ ತೋರಿಸಿದರು.

 ‘ಕೇಸರಿ’ಯ ಎದುರು ಪಾಪ ಈ ಭಿಕ್ಷುಕರದ್ದು ಏನೂ ನಡೆಯುವುದಿಲ್ಲ. ‘ಕೇಸರಿ’ ಮಹಾರಾಷ್ಟ್ರದ ಹೆಸರಾಂತ ಪತ್ರಿಕೆ. ಇತ್ತೀಚೆಗೆ ಅದು ತನ್ನ ಹೆಸರನ್ನು ಕಳೆದುಕೊಳ್ಳುತ್ತಿರುವುದು ನಿಜವಾದರೂ, ‘ಇಂಗು ಮುಗಿದರೂ ಸುವಾಸನೆ ಹೋಗಲಿಲ್ಲ’ ಅನ್ನುವಂತೆ ಅದರ ಹೆಸರು ಸ್ವಲ್ಪ ಉಳಿದುಕೊಂಡಿದೆ. ಹಾಗೂ ಅನೇಕರು ತಮ್ಮ ಧೋರಣೆ ಹಾಗೂ ಅನಿಸಿಕೆಗಳನ್ನು ‘ಕೇಸರಿ’ಯ ಧೋರಣೆ ಹಾಗೂ ಅನಿಸಿಕೆಯ ಮೇಲಿಂದ ನಿರ್ಧರಿಸುತ್ತಾರೆ. ‘ಕೇಸರಿ’ಯೇನಾದರೂ ಕಟ್ಟುನಿಟ್ಟಾಗಿ ಉಪದೇಶ ಕೊಟ್ಟರೆ ಪಾಲೇಯ ಶಾಸ್ತ್ರಿಗಳಂತಹ ಭಿಕ್ಷುಕರು ಅವರ ವಲಯದಲ್ಲಿದ್ದ ಬ್ರಾಹ್ಮಣೇತರ ಜನತೆಯನ್ನು ಸರಿದಾರಿಗೆ ತರಲು ಪ್ರಯತ್ನಿಸಿದಂತೆ ಇತರ ಭಿಕ್ಷುಕರೂ ಮಾಡಿಯಾರು ಅನ್ನುವುದರಲ್ಲಿ ಸ್ವಲ್ಪವೂ ಅನುಮಾನವಿಲ್ಲ. ಒಬ್ಬ ಸಾಧಾರಣ ಭಿಕ್ಷುಕನು ಮಾಡಿ ತೋರಿಸಿದ್ದನ್ನು ನೀವೂ ಮಾಡಿ ಎಂದು ಹೇಳುವ ಧೈರ್ಯ ‘ಕೇಸರಿ’ಯಲ್ಲೆಲ್ಲಿದೆ! ಛು, ಎಂದು ಮೈ ಮೇಲೆ ನಾಯಿ ಬಿಡುವ ಅಥವಾ ಅದು ಸರಪಳಿ ಬಿಡಿಸಿಕೊಂಡಾಗ ಅದನ್ನು ಹಿಡಿಯಲು ಪ್ರಯತ್ನಿಸಿದ ನಾಯಿಯ ಮಾಲಕ ತಪ್ಪಿತಸ್ಥನಾಗುವುದಿಲ್ಲ. ತಪ್ಪು ಆ ನಾಯಿಯದ್ದೇ ಆಗಿರುತ್ತದೆ ಎಂದು ‘ಕೇಸರಿ’ಯವರು ಹೇಳಿದ್ದು ಹಾಸ್ಯಾಸ್ಪದವಾಗಿದೆ. ನಾವು ಕೆಲವು ವಿಶೇಷ ಪ್ರಸಂಗಗಳಲ್ಲಿ ಬ್ರಾಹ್ಮಣೇತರರ ವಿರುದ್ಧವೂ ಬರೆಯುತ್ತೇವೆ. ಅಂದ ಮಾತ್ರಕ್ಕೆ ಬ್ರಾಹ್ಮಣೇತರರಲ್ಲಿ ಬ್ರಾಹ್ಮಣ ನಿಲುವಿನ ಜ್ಯೋತಿಯನ್ನು ಬೆಳಗುವವರು ಯರು? ಅನ್ನುವುದರ ಬಗ್ಗೆ ನಮಗೆ ಅನುಮಾನವಿದೆ ಎಂದು ಮಾತ್ರ ಯಾರು ಅಂದುಕೊಳ್ಳಬಾರದು. ದಲಿತರು ಹಾಗೂ ಬ್ರಾಹ್ಮಣೇತರರಲ್ಲಿ ಒಡಕುಂಟಾದರೆ ತಮ್ಮ ಅಧಿಕಾರವನ್ನು ಉಪಯೋಗಿಸಿ ಅವರನ್ನು ಒಟ್ಟುಗೂಡಿಸಲು ಪ್ರಯತ್ನಿಸುವುದಕ್ಕಿಂತ ಬ್ರಾಹ್ಮಣೇತರರು ನಿಮ್ಮ ಶತ್ರುಗಳು ಎಂದಷ್ಟೇ ತೋರಿಸಿಕೊಡುವಲ್ಲಿ ಕಷ್ಟಪಡುವ ಬ್ರಾಹ್ಮಣರು ದಲಿತರು ತಮ್ಮನ್ನು ಗೆಳೆಯರನ್ನಾಗಿ ಪರಿಗಣಿಸಿಯಾರು ಅಂದುಕೊಂಡಿದ್ದರೆ ತಪ್ಪು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News