ಸುಪ್ರೀಂ ತೀರ್ಪು ಸ್ವಾಗತ: ಯಡಿಯೂರಪ್ಪ

Update: 2018-02-16 15:19 GMT

ಬೆಂಗಳೂರು, ಫೆ.16: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನಮ್ಮ ರಾಜ್ಯದ ಅಹವಾಲುಗಳನ್ನು ಭಾಗಶಃ ಒಪ್ಪಿದೆ. ನಮ್ಮ ರೈತರಿಗೆ, ಜನರ ಕುಡಿಯುವ ನೀರಿಗೆ ಹೆಚ್ಚುವರಿ ನೀರು ದೊರಕುವಂತಾಗಿರುವುದು ಸ್ವಲ್ಪ ಸಮಾಧಾನ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯದ ಮೇಲ್ಮನವಿಯನ್ನು ಭಾಗಶಃ ಒಪ್ಪಿರುವ ಸುಪ್ರೀಂಕೋರ್ಟ್, ನಮ್ಮ ರಾಜ್ಯಕ್ಕೆ ಹೆಚ್ಚುವರಿಯಾಗಿ 14.5 ಟಿಎಂಸಿ ನೀರು, ಬೆಂಗಳೂರಿಗೆ ಹೆಚ್ಚುವರಿಯಾಗಿ 4.75 ಟಿಎಂಸಿ ಕುಡಿಯುವ ನೀರು, ನಮ್ಮ ನೀರಾವರಿ ಪ್ರದೇಶವನ್ನು ಹೆಚ್ಚಳ ಮಾಡಿಕೊಳ್ಳುವ ಅವಕಾಶ ನೀಡಿರುವುದಲ್ಲದೆ, ತಮಿಳುನಾಡಿನ ಅಂತರ್ಜಲವನ್ನು ಪರಿಗಣಿಸಬೇಕೆಂಬ ರಾಜ್ಯದ ವಾದವನ್ನು ಒಪ್ಪಿರುವುದು ನಮಗೆ ಅನುಕೂಲಕರವಾಗಿದೆ ಎಂದು ಅವರು ಹೇಳಿದ್ದಾರೆ.

ಆದರೆ, 1892 ಮತ್ತು 1924ರ ಒಪ್ಪಂದಗಳನ್ನು ಎತ್ತಿ ಹಿಡಿದಿರುವುದು, ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನು ಕೇಂದ್ರ ಸರಕಾರದ ದಾಯಿತ್ವಕ್ಕೆ ಒಪ್ಪಿಸಿರುವುದು ಮೊದಲಾದ ತೀರ್ಪಿನಲ್ಲಿ ಉಲ್ಲೇಖವಾಗಿರುವ ಎಲ್ಲ ಸಂಗತಿಗಳ ಬಗ್ಗೆ ಇನ್ನೂ ಆಳವಾಗಿ ಅಧ್ಯಯನ ನಡೆಸಬೇಕಾದ ಅವಶ್ಯಕತೆಯಿದೆ ಎಂದು ಯಡಿಯೂರಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News