ಹಾಸನ: ಬೆಂಕಿ ದಾಳಿಗೆ ಒಳಗಾಗಿದ್ದ ವ್ಯಕ್ತಿ ಮೃತ್ಯು

Update: 2018-02-16 17:38 GMT

ಹಾಸನ,ಫೆ.16: ಇತ್ತೀಚಿಗೆ ದುಷ್ಕರ್ಮಿಗಳ ಬೆಂಕಿದಾಳಿಗೆ ಒಳಗಾಗಿದ್ದ ಹಣ್ಣುಮಾರುವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಅಬ್ದುಲ್ ಖಾದರ್ ಉರಫ್ ಬಾಷ (40) ಎಂದು ಗುರುತಿಸಲಾಗಿದೆ. 

ಘಟನೆಯ ವಿವರ: ಬಾಷ ಮೂಲತಃ ಶುಂಠಿ ವ್ಯಾಪಾರಿಯಾಗಿದ್ದು, ಶುಂಠಿ ಸಿಗದ ಸಂದರ್ಭ ಬಾಳೆಹಣ್ಣು, ಕಲ್ಲಂಗಡಿ ಹಣ್ಣಿನ ವ್ಯಾಪಾರವನ್ನು ಮಾಡುತ್ತಿದ್ದರು.
ಸೋಮವಾರ 12 ಘಂಟೆಗೆ ದುದ್ದ ಸಮೀಪದ ವ್ಯಕ್ತಿಯೊಬ್ಬರಿಂದ ಕಲ್ಲಂಗಡಿ ಖರೀದಿಸಿದ್ದು, ಇವರ ಜೊತೆಗಿದ್ದ ಮುಶೀರ್ ಎಂಬ ವ್ಯಕ್ತಿ ಸೋಮವಾರ ಸಂಜೆ 5 ಗಂಟೆಗೆ ಮತ್ತೊಂದು ವಾಹನದಲ್ಲಿ ಕಲ್ಲಂಗಡಿ ಹಣ್ಣು ತುಂಬಿಕೊಂಡು ಹಾಸನ ತಲುಪಿದ್ದಾರೆ.

ಸುಮಾರು 800 ಕಲ್ಲಂಗಡಿ ಹಣ್ಣು ಗಳನ್ನು ತನ್ನ ಆಪೆ ಗೂಡ್ಸ್ ವಾಹನದಲ್ಲಿ ಏರಿಕೊಂಡು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವ್ಯಾಪಾರ ಮುಗಿಸಿ ಊರಿಗೆ ತೆರಳುತ್ತಿದ್ದಾಗ ವಾಹನ ಕೆಟ್ಟು ದಾರಿ ಮದ್ಯೆ ನಿಂತಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಬಾಷರವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ದಾರಿಹೋಕರು ಪೋಲಿಸರಿಗೆ ಮತ್ತು ಅಂಬುಲೇನ್ಸ್ ಗೆ ವಿಚಾರ ತಿಳಿಸಿ ಹಾಸನದ ಸರ್ಕಾರಿ ಆಸ್ಫತ್ರೆಗೆ ದಾಖಲಿಸಿದ್ದಾರೆ. ಬಾಷರವರ ದೇಹದ ತಲೆ, ಬೆನ್ನು, ಸೊಂಟ ಸೇರಿದಂತೆ ಶೇಖಡ 60 ಕ್ಕೂ ಹೆಚ್ಚು ಭಾಗ ಸುಟ್ಟು ಹೋಗಿತ್ತು.

ಮೃತರ ಕೊನೆಯ ಹೇಳಿಕೆ: ಫೆ.13ರಂದು ಸೋಮವಾರ ರಾತ್ರಿ ನಾನು ವ್ಯಾಪಾರ ಮುಗಿಸಿ ಮನೆಗೆ ಹೊರಟಿದ್ದೆ. ಆಗ ವಾಹನ ಕೆಟ್ಟು ನಿಂತಿತು, ಒಬ್ಬರ ಮನೆಯಲ್ಲಿ ಕಲ್ಲಂಗಡಿ ಹಣ್ಣು ಖಾಲಿಮಾಡಿ, ಕಷ್ಟ ಪಟ್ಟು ವಾಹನ ರಿಪೇರಿ ಮಾಡಿಕೊಂಡು ಮನೆಗೆ ಹೊರಟೆ. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಬಿಳಿ ಬಣ್ಣದ ಮಾರುತಿ ಓಮ್ನಿಯಲ್ಲಿದ್ದವರು ನನ್ನ ವಾಹನವನ್ನು ಅಡ್ಡಗಟ್ಟಿದರು. ನಾನು ವಾಹನದ ಒಳಗೆ ಕುಳಿತಿದ್ದ ಸಂದರ್ಭದಲ್ಲಿ ಪೆಟ್ರೋಲ್ ಸುರಿದರು. ಈ ವೇಳೆ ಎಷ್ಟೇ ಗೋಗರೆದರೂ ಕೇಳದೇ ನನ್ನ ಮೇಲೆಯೂ ಹಲ್ಲೆಗೆ ಮುಂದಾದರು. ನಂತರ ನನಗೂ, ನನ್ನ ವಾಹನಕ್ಕೂ ಒಟ್ಟಿಗೆ ಬೆಂಕಿ ಹಚ್ಚಿದರು. ಅವರು ವಾಹನ ತಿರುರುಗಿಸಿ ಕೊಂಡು ಹೋಗುವಾಗ ಕಾರಿನ ಮೇಲಿದ್ದ ಬಾವುಟವನ್ನು ನೋಡಿದೆ ಎಂದು ಆಪ್ತರಲ್ಲಿ ಹೇಳಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕಮಾರ್ ಷಾಪುರವಾಡ್ ರವರು ಘಟನಾ ಸ್ಥಳಕ್ಕೆ ತೆರಳಿ 4 ಗಂಟೆಗೂ ಹೆಚ್ಚು ಕಾಲ ತಪಾಸನೆ ನಡೆಸಿದ್ದು, ಅಪಾರಾಧಿಗಳ ಪತ್ತೆಗೆ 4 ಜನ ಪೋಲಿಸರ ತಂಡವನ್ನು ರಚಿಸಿದ್ದಾರೆ. ಮೈಸೂರಿನಿಂದ ಅಪರಾಧ ಪರಿಣಿತರ ತಂಡ ಮಾಹಿತಿ ಕಲೆ ಹಾಕುತ್ತಿದೆ.

ಮಾನವೀಯತೆ ಮೆರೆದ ಎಸ್ ಪಿ 
ಹೆಚ್ಚಿನ ಚಿಕಿತ್ಸೆಗಾಗಿ ಬಾಷ ಕುಟುಂಬ ಬೆಂಗಳೂರಿಗೆ ತೆರಳಲು ನಿರಾಕರಿಸಿರುವುದನ್ನು ಮನಗಂಡ ಎಸ್ ಪಿ, ಕುಟುಂಬಸ್ಥರೊಡನೆ ಸಮಾಲೋಚನೆ ನಡೆಸಿ, ಬಾಷ ರವರ ಚಿಕಿತ್ಸೆಯ ವೆಚ್ಚವನ್ನು ತಾವೇ ಭರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ನಂತರ ಬಾಷರವರ ಪತ್ನಿಯ ಕೈಗೆ 30 ಸಾವಿರ ರೂ. ನಗದನ್ನು ನೀಡಿ ಒಬ್ಬ ಪೊಲೀಸ್ ಅಧಿಕಾರಿಯೊಂದಿಗೆ ಬೆಂಗಳೂರಿಗೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News