ಮೃತ ಸ್ವಾಮೀಜಿಯ ವೇಷ ಧರಿಸಿ ವಂಚಿಸುತ್ತಿದ್ದ ಆರೋಪಿಗಳು ನ್ಯಾಯಾಂಗ ವಶಕ್ಕೆ

Update: 2018-02-16 17:46 GMT

ಶಿವಮೊಗ್ಗ, ಫೆ.16: ತಾಲೂಕಿನ ಹಾರನಹಳ್ಳಿಯ ರಾಮಲಿಂಗೇಶ್ವರ ಮಠದ ಕೋಟ್ಯಂತರ ರೂ. ಮೌಲ್ಯದ ಸ್ಥಿರಾಸ್ತಿ ಕಬಳಿಸುವ ಉದ್ದೇಶದಿಂದ ಇಹಲೋಹ ತ್ಯಜಿಸಿದ ಸ್ವಾಮೀಜಿಯ ವೇಷ ಧರಿಸಿ ಪೊಲೀಸರ ಅತಿಥಿಯಾಗಿದ್ದ ಜ್ಯೋತಿಷಿ ಶಿವಕುಮಾರ್(48)ನನ್ನು ಶುಕ್ರವಾರ ಶಿವಮೊಗ್ಗದ ಕುಂಸಿ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. 

ಕಳೆದ ಮಂಗಳವಾರ ಆರೋಪಿ ಶಿವಕುಮಾರ್ ಹಾಗೂ ಆತನ ಪರಿಚಾರಕನೆಂದು ಹೇಳಿಕೊಂಡು ಓಡಾಡುತ್ತಿದ್ದ ಹಾರ್ನಹಳ್ಳಿ ಸಮೀಪದ ಚಾಮೇನಹಳ್ಳಿಯ ನಿವಾಸಿ ವೀರೇಶ್(40) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಬುಧವಾರ ಶಿವಮೊಗ್ಗದ 2ನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂಭಾಗ ಇಬ್ಬರು ಆರೋಪಿಗಳನ್ನು ಕುಂಸಿ ಪೊಲೀಸರು ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಮೂರು ದಿನಗಳ ಕಾಲ ಶಿವಕುಮಾರ್‌ನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆರೋಪಿಯನ್ನು ಶುಕ್ರವಾರ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಶೋಧ: ವಿಚಾರಣೆಯ ವೇಳೆ ಆರೋಪಿ ಶಿವಕುಮಾರ್ ನೀಡಿದ ಮಾಹಿತಿಯ ಆಧಾರದ ಮೇಲೆ ಸಬ್‌ಇನ್‌ಸ್ಪೆಕ್ಟರ್ ಜಿ.ಎಸ್. ಸಂದೀಪ್ ಮತ್ತವರ ಸಿಬ್ಬಂದಿಯು ಆರೋಪಿಯ ಜೊತೆ ಬೆಂಗಳೂರಿನ ವಿವಿಧೆಡೆಯಿರುವ ಸಬ್‌ರಿಜಿಸ್ಟಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಭೇಟಿಯಿತ್ತು, ದಾಖಲಾತಿಗಳ ಪರಿಶೀಲನೆ ನಡೆಸಿದೆ. ಜೊತೆಗೆ ಮಹತ್ವದ ದಾಖಲಾತಿಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಬೆಂಗಳೂರಿನ ಗಾಂಧಿನಗರ, ರಾಜಾಜಿನಗರ ಹಾಗೂ ಮಲ್ಲೇಶ್ವರಂನಲ್ಲಿರುವ ಸಬ್‌ರಿಜಿಸ್ಟಾರ್ ಕಚೇರಿ ಮತ್ತು ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಪೊಲೀಸರು ಭೇಟಿಯಿತ್ತು ದಾಖಲಾತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಬೆಂಗಳೂರು ಮೂಲದ ಇಬ್ಬರು ವಕೀಲರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಘಟನೆಯ ವಿವರ: ಶಿವಮೊಗ್ಗ ತಾಲೂಕಿನ ಹಾರ್ನಹಳ್ಳಿಯಲ್ಲಿರುವ ರಾಮಲಿಂಗೇಶ್ವರ ಮಠವು ಅತ್ಯಂತ ಹಳೇಯ ಮಠವಾಗಿದೆ. ಈ ಮಠಕ್ಕೆ ಸೇರಿದ ನೂರಾರು ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿದೆ. ಇದನ್ನು ಕಬಳಿಸಲು ವಂಚಕರ ತಂಡವು ನಿರ್ಧರಿಸಿತ್ತು. ರಾಮಲಿಂಗೇಶ್ವರ ಮಠದ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ 2014ರಲ್ಲಿಯೇ ಮೃತಪಟ್ಟಿದ್ದರು. ಇವರು ಜೀವಂತವಾಗಿದ್ದಾರೆ ಎಂದು ದಾಖಲೆ ಸೃಷ್ಟಿಸಲಾಗಿತ್ತು.

ಜ್ಯೋತಿಷಿ ಹಾಗೂ ವಧುವರರ ಅನ್ವೇಷಣಾ ಕೇಂದ್ರ ತೆರೆದುಕೊಂಡಿದ್ದ ಆರೋಪಿ ಶಿವಕುಮಾರ್‌ನನ್ನೇ ಮೃತಪಟ್ಟ ಶಿವಾಚಾರ್ಯ ಸ್ವಾಮೀಜಿಯ ವೇಷ ತೊಡಿಸಲಾಗಿತ್ತು. ಚಂದ್ರಮೌಳೇಶ್ವರ ಸ್ವಾಮೀಜಿ ಹೆಸರಿನಲ್ಲಿಯೇ ಭಾವಚಿತ್ರ ಸಹಿತ ಮತದಾರರ ಚೀಟಿ (ಎಪಿಕ್ ಕಾರ್ಡ್) ಹಾಗೂ ಆಧಾರ್ ಕಾರ್ಡ್ ಕೂಡ ಮಾಡಿಸಲಾಗಿತ್ತು. ಇದರ ಆಧಾರದ ಮೇಲೆ ಬೆಂಗಳೂರಿನ ರೇಸ್‌ಕೋರ್ಸ್ ಹಾಗೂ ಯಲಹಂಕದ ಬಳಿಯಿದ್ದ ಸುಮಾರು ಎರಡು ಸ್ಥಿರಾಸ್ತಿಗಳನ್ನು 15 ಕೋಟಿ ರೂ.ಗೆ ಪರಭಾರೆ ಮಾಡಲು ವ್ಯಕ್ತಿಯೋರ್ವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಹಾಗೆಯೇ ಹಾರನಹಳ್ಳಿ ಸಮೀಪದ ಸಂಕದಕೊಪ್ಪಎಂಬ ಗ್ರಾಮದಲ್ಲಿ ಚಂದ್ರಮೌಳೇಶ್ವರ ಸ್ವಾಮೀಜಿ ಜೀವಂತವಾಗಿದ್ದಾಗ ಒಂದೂವರೆ ಎಕರೆ ಜಮೀನು ಖರೀದಿಗೆ ನಿರ್ಧರಿಸಿ ಸಂಬಂಧಿಸಿದ ಭೂ ಮಾಲಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅಕಾಲಿಕ ನಿಧನದಿಂದ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

ಮತ್ತೊಂದೆಡೆ ಜಮೀನಿನ ಮಾಲಕನ ಬಳಿ ಆರೋಪಿ ಶಿವಕುಮಾರ್‌ನು ತಾನೇ ಚಂದ್ರಮೌಳೇಶ್ವರ ಸ್ವಾಮೀಜಿ ಎಂದು ನಂಬಿಸಿ, ಆ ಜಮೀನನ್ನು ಬರೆಯಿಸಿಕೊಂಡಿದ್ದ. ಈ ವಂಚನೆಯ ಮಾಹಿತಿ ಅರಿತ ರಾಮಲೀಗೇಶ್ವರ ಮಠದ ವಿಶ್ವಾರಾಧ್ಯ ಸ್ವಾಮೀಜಿ ಹಾಗೂ ನೀಲಕಂಠೇಶ್ವರ ದೇಶಿಕೇಂದ್ರ ಸ್ವಾಮೀಜಿ ಕುಂಸಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಿಸಿದ್ದರು.

ಮೃತ ಸ್ವಾಮೀಜಿ ಹೆಸರಿನಲ್ಲಿ ಹಲವು ‘ಕಳ್ಳ ಸ್ವಾಮೀಜಿ’ಗಳು ತಾವೇ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿಗಳೆಂದು ದಾಖಲಾತಿ ಸೃಷ್ಟಿಸಿ, ರಾಮಲಿಂಗೇಶ್ವರ ಮಠಕ್ಕೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳನ್ನು ಪರಭಾರೆ ಮಾಡಿದ್ದಾರೆಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಬಯಲಿಗೆ ಬಂದಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಕುಂಸಿ ಪೊಲೀಸರಿಗೆ ಇನ್ನೂ ಹಲವು ‘ಕಳ್ಳಸ್ವಾಮಿ’ಗಳು ಮಠದ ಆಸ್ತಿ ದುರ್ಬಳಕೆ ಮಾಡಿಕೊಂಡಿರುವ ಮಾಹಿತಿಗಳು ಲಭ್ಯವಾಗಿದೆ ಎಂದು ಹೇಳಲಾಗಿದ್ದು, ಈಗಾಗಲೇ ಸರಕಾರಿ ಕಚೇರಿಗಳಿಗೆ ನಕಲಿ ದಾಖಲೆ ಕೊಟ್ಟು ನೂರಾರು ಕೋಟಿ ರೂ. ಮೊತ್ತದ ಆಸ್ತಿಯನ್ನು ಲಪಟಾಯಿಸಲಾಗಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. ಮಠಕ್ಕೆ ಸೇರಿದ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿದ್ದು, ಎಲ್ಲೆಲ್ಲಿ ಮಠಕ್ಕೆ ಸೇರಿದ ಆಸ್ತಿಯಿದೆ ಎಂಬ ಮಾಹಿತಿಯೇ ಸ್ಪಷ್ಟವಾಗಿ ಮಠದವರಿಗೆ ತಿಳಿದಿಲ್ಲ ಎನ್ನಲಾಗಿದೆ.

ಆದರೆ ಮಠದ ಆಸ್ತಿ ಎಲ್ಲೆಲ್ಲಿದೆ ಎಂಬುವುದನ್ನು ಪತ್ತೆ ಹಚ್ಚುವ ವಂಚಕರ ತಂಡವು, ‘ನಕಲಿ ಸ್ವಾಮೀಜಿ’ಗಳನ್ನು ಸೃಷ್ಟಿಸಿ ಯಾರ ಗಮನಕ್ಕೂ ಬಾರದಂತೆ ಸ್ಥಿರಾಸ್ತಿ ಲಪಟಾಯಿಸುವ ದಂಧೆ ನಡೆಸುತ್ತಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. ಪೊಲೀಸರ ಉನ್ನತ ತನಿಖೆಯಿಂದ ಸತ್ಯಾಂಶ ಬೆಳಕಿಗೆ ಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News