ಈಶ್ವರಪ್ಪರಿಗೆ ಅವಮಾನಿಸಿದರೆ ಸುಮ್ಮನಿರಲ್ಲ: ಯುವ ಬ್ರಿಗೇಡ್ ಕಾರ್ಯಕರ್ತರ ಎಚ್ಚರಿಕೆ

Update: 2018-02-16 17:51 GMT

ಶಿವಮೊಗ್ಗ, ಫೆ.16: ಶಿವಮೊಗ್ಗದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಟಿಕೆಟ್ ರಾಜಕೀಯ ದಿನೇದಿನೇ ಹೊಸ ತಿರುವು ಪಡೆಯುತ್ತಿದ್ದು, ಈಶ್ವರಪ್ಪ ಬೆಂಬಲಿಗರು ಯಡಿಯೂರಪ್ಪ ಬಣಕ್ಕೆ ಎಚ್ಚರಿಕೆ ನೀಡಿದ ಘಟನೆ ಶುಕ್ರವಾರ ಶಿವಮೊಗ್ಗ ಕಚೇರಿಯಲ್ಲಿ ನಡೆಯಿತು.

ಬಿ.ಎಸ್. ಯಡಿಯೂರಪ್ಪನಿವಾಸದಲ್ಲಿ ನಡೆದ ಸಭೆಯ ವೇಳೆ ಕೆ.ಎಸ್. ಈಶ್ವರಪ್ಪಅವರನ್ನು ನಿಂದಿಸಿದ ಮುಖಂಡ ಬಿಳಕಿ ಕೃಷ್ಣಮೂರ್ತಿಯನ್ನು ಪಕ್ಷದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಯುವ ಬ್ರಿಗೇಡ್ ಕಾರ್ಯಕರ್ತರು ಶುಕ್ರವಾರ ನಗರದ ಬಿಜೆಪಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ನಗರ ಕ್ಷೇತ್ರದಿಂದ ಕೆಎಸ್‌ಇಗೆ ಟಿಕೆಟ್ ನೀಡಬಾರದು. ಎಸ್.ರುದ್ರೇಗೌಡರಿಗೆ ಟಿಕೆಟ್ ನೀಡಬೇಕು ಎಂದು ಕೆಲ ನಾಯಕರು ಸಭೆಯಲ್ಲಿ ಹೇಳಿರುವುದು ಸರಿಯಲ್ಲ. ಹಾಗೆಯೇ ಕೆಎಸ್‌ಇ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುವ ರೀತಿ ಯಲ್ಲಿ ನಾಯಕರು ಕೀಳುಮಟ್ಟದಲ್ಲಿ ಮಾತನಾಡಿರುವುದು ಖಂಡನಾರ್ಹವಾದುದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸ ಬೇಕು ಎಂಬ ನಿರ್ಧಾರವನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ವರಿಷ್ಠರು ನಿರ್ಧರಿಸಲಿದ್ದಾರೆ. ಸಮೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡುವುದಾಗಿಯೂ ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಆದರೆ ಕೆಲ ನಾಯಕರು ಕೆಎಸ್‌ಇಗೆ ಟಿಕೆಟ್ ನೀಡಬಾರದು ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಕೆಎಸ್‌ಈ ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತರಾಗಿದ್ದಾರೆ. ಕಳೆದ ಹಲವು ದಶಕಗಳಿಂದ ಅತ್ಯಂತ ನಿಷ್ಠೆ, ತತ್ವ- ಸಿದ್ಧಾಂತಕ್ಕೆ ಬದ್ಧರಾಗಿದ್ದುಕೊಂಡು ಕಾರ್ಯನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಅವರು ಶಾಸಕರಾಗಿದ್ದಾಗ, ಮಂತ್ರಿಯಾಗಿದ್ದಾಗ ಶಿವಮೊಗ್ಗ ನಗರ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಅವರಿಗೆ ಟಿಕೆಟ್ ಕೊಡಬಾರದು ಎಂದು ಒತ್ತಾಯಿಸುವುದು ಪಕ್ಷ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಚಟುವಟಿಕೆ ನಡೆಸುವ ಮೂಲಕ ಪಕ್ಷದ ಸಂಘಟನೆಗೆ ಇರುಸು-ಮುರುಸು ಉಂಟು ಮಾಡುವ ಕೆಲಸವನ್ನು ಕೆಲ ನಾಯಕರು ನಡೆಸುತ್ತಿದ್ದಾರೆ. ಇಂತಹವರನ್ನು ತಕ್ಷಣವೇ ಪಕ್ಷದಿಂದ ಉಚ್ಚಾಟಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಹಗುರ ಮಾತಿಗೆ ಅಲ್ಪಸಂಖ್ಯಾತ ನಾಯಕರ ಆಕ್ಷೇಪ

ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪ ವಿರುದ್ಧ ಕೆಲ ನಾಯಕರು ಹಗುರವಾಗಿ ಮಾತನಾಡಿರುವುದು ಖಂಡನಾರ್ಹವಾದುದು. ಕೆಲ ನಾಯಕರ ಈ ವರ್ತನೆ ಸರಿಯಲ್ಲ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಫೀವುಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಯಾರಿಗೆ ನೀಡಬೇಕು ಎನ್ನುವುದು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಆದರೆ ಕೆಲ ನಾಯಕರು ಕೆಎಸ್‌ಈಗೆ ಟಿಕೆಟ್ ನೀಡಬಾರದು ಎಂದು ಸಭೆ ನಡೆಸಿ ಬಹಿರಂಗವಾಗಿ ಹೇಳುವುದು ಸಮಂಜಸವಲ್ಲ. ಇದನ್ನು ಒಪ್ಪಲು ಆಗುವುದಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News