ಕಾವೇರಿ ತೀರ್ಪು ರಾಜ್ಯದ ಪರ: ಕನ್ನಡ ಸಂಘಟನೆಗಳಿಂದ ಸಿಹಿ ಹಂಚಿ ಸಂಭ್ರಮಾಚರಣೆ

Update: 2018-02-16 18:11 GMT

ಮೈಸೂರು,ಫೆ.16: ಕಾವೇರಿ ವಿವಾದ ಕನ್ನಡಿಗರಿಗೆ ಗೆಲುವು ತಂದಿದ್ದು, ಸುಪ್ರೀಂಕೋರ್ಟ್ ತೀರ್ಪು ಪ್ರಕಟ ಹಿನ್ನಲೆ ಮೈಸೂರು ನಗರಾದ್ಯಂತ ಕನ್ನಡ ಪರ ಸಂಘಟನೆಗಳು ಸಿಹಿ ಹಂಚಿ ಸಂಭ್ರಮವನ್ನು ಆಚರಿಸಿದರು.

ಮೈಸೂರು ಕನ್ನಡ ಚಳುವಳಿಗಾರರ ಸಂಘದವರು ನ್ಯಾಯಾಲಯದ ಮುಂಭಾಗವಿರುವ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾವೇರಿಗೆ ಮತ್ತು ಸುಪ್ರೀಂಕೋರ್ಟ್ ಗೆ ಜೈಕಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು. ಇದೇ ಸಂದರ್ಭ ಕನ್ನಡ ಚಳುವಳಿಗಾರ ಬಿ.ಎ.ಶಿವಶಕರ್ ನೀರು ಕುಡಿದು ಸಂತಸ ವ್ಯಕ್ತಪಡಿಸಿದರು. 

ಇದೇ ವೇಳೆ ಮಾತನಾಡಿದ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಈ ತೀರ್ಪು ಕರ್ನಾಟಕದ ಜನತೆಗೆ ಸಂದ ಜಯ. ರಾಜ್ಯ ಸರ್ಕಾರ ಹಲವಾರು ವರ್ಷಗಳಿಂದ ಹೋರಾಡಿಕೊಂಡು ಬಂದದ್ದು ಇಂದು ಜಯ ಕಾಣಲು ಸಾಧ್ಯವಾಯಿತು. ಹಾಗೆ ಮುಖ್ಯಮಂತ್ರಿಗಳ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣವನ್ನು ವಜಾಗೊಳಿಸಿರುವುದು ಸಂತಸ ಉಂಟುಮಾಡಿದೆ ಎಂದು ಹೇಳಿದರು.

ಸಂಭ್ರಮಾಚರಣೆಯಲ್ಲಿ ಸಾಹಿತಿ ಪ್ರೊ. ಎಸ್.ಭಗವಾನ್, ಕರ್ನಾಟಕ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಶಿವರಾಮ್, ಸೇರಿದಂತೆ ಹಲವಾರು ಮಂದಿ ಕನ್ನಡ ಪರ ಚಳುವಳಿಗಾರರು ಪಾಲ್ಗೊಂಡಿದ್ದರು. 

ಮತ್ತೊಂದೆಡೆ ನಗರದ ಅಗ್ರಹಾರ ವೃತ್ತದಲ್ಲಿ ಜಯಕರ್ನಾಟಕ ಸಂಘಟನೆಯ ಯೂತ್ ಅಧ್ಯಕ್ಷ ಅಜಯ್ ಶಾಸ್ತ್ರಿ ನೇತೃತ್ವದಲ್ಲಿ ಸಿಹಿ ಹಂಚಿ  ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘಟನೆಯ ಬಸವರಾಜು, ಮಾಜಿ ನಗರಪಾಲಿಕೆ ಸದಸ್ಯ ಎಂ.ಡಿ.ಪಾರ್ಥಸಾರಥಿ, ಜಯಕರ್ನಾಟಕ ಸಂಘಟನೆ ಯೂತ್ ಅಧ್ಯಕ್ಷ ಅಜಯ್ ಶಾಸ್ತ್ರಿ, ನಗರಾಧ್ಯಕ್ಷ ಉಮೇಶ್ ಕುಮಾರ್, ಹೆಚ್.ಎನ್.ಶ್ರೀಧರಮೂರ್ತಿ, ಸಂದೇಶ್ ಪವಾರ್, ಆದು ಪುರಂ, ಜಯಸಿಂಹ, ರಂಗನಾಥ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News