ಯುವಕರು ಸಮಾಜದ ಜೊತೆ ಮೌಲ್ಯಗಳನ್ನೂ ಬದಲಾಯಿಸುವ ಅಗತ್ಯವಿದೆ: ಎಚ್.ಎಸ್.ದೊರೆಸ್ವಾಮಿ

Update: 2018-02-17 14:01 GMT

ಮೈಸೂರು,ಫೆ.17: ಇಂದಿನ ಯುವಕರು ಸಮಾಜವನ್ನು ಬದಯಾಯಿಸುವುದರ ಜೊತೆಗೆ ಮೌಲ್ಯಗಳನ್ನು ಬದಲಾಯಿಸುವ ಅವಶ್ಯಕತೆಯಿದೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯ ಡಾ.ಬಾಬೂ ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನ ಮತ್ತು ವಿಸ್ತರಣ ಕೇಂದ್ರ ಹೆಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ಮೈಸೂರು ಮತ್ತು ಗಾಂಧಿಭವನ ಬೆಂಗಳೂರು ಆಶ್ರಯದಲ್ಲಿ ಶನಿವಾರ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಲಾದ “ಆಧುನಿಕ ಕರ್ನಾಟಕದ ರೂಪಿಕೆಯಲ್ಲಿ ಹೆಚ್.ಸಿ.ದಾಸಪ್ಪ ಮತ್ತು ಯಶೋಧರಾ ದಾಸಪ್ಪರವರ ಪಾತ್ರ” ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. 

ಇಂದಿನ ಯುವಕರು ಸಮಾಜಮುಖಿಗಳಾಗಬೇಕು. ಉತ್ತಮ ಸಮಾಜ ಕಟ್ಟಬೇಕು. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಬಡವ ಬಡವನಾಗಿಯೇ ಇದ್ದಾನೆ. ಭಾರತದ ಆಸ್ತಿಯಲ್ಲಿ ಒಂದು ಪರ್ಸೆಂಟ್ ಮಾತ್ರ ಬಡವರ ಬಳಿಯಿದ್ದು, 99ಪರ್ಸೆಂಟ್ ಶ್ರೀಮಂತರ ಕೈಯಲ್ಲಿದೆ. ಈ ಕುರಿತು ಯುವಕರು ಯೋಚಿಸಬೇಕು. ವಿಚಾರವಂತರಾಗಬೇಕು. ದೇಶದ ಸಮಸ್ಯೆಯನ್ನು ಅರ್ಥಮಾಡಿಕೊಂಡು ಎಲ್ಲರಿಗೂ ನ್ಯಾಯ ದೊರಕಿಸಿಕೊಡಬೇಕು ಎಂದರು.

ಒಬ್ಬನು ಗುಡಿಸಲು ಕಟ್ಟಿ ವಾಸಿಸುತ್ತಾನೆ ಎಂದಾದರೆ ಅಲ್ಲಿ ಪೊಲೀಸರನ್ನು ಕರೆತಂದು ಲಾಠಿಚಾರ್ಜ್ ನಡೆಸಿ ಆತನನ್ನು ಓಡಿಸಲಾಗುತ್ತದೆ. ಅವನು ಕೂಡ ಭಾರತೀಯನಲ್ಲವೇ, ಅವನಿಗೂ ಕೂಡ ವಾಸಿಸುವ ಹಕ್ಕಿಲ್ಲವೇ, ಯಾವುದೇ ಗುಡಿಸಲು ತೆಗೆಸುವ ಮುನ್ನ ಆತನಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಮತ್ತೆ ಅಲ್ಲಿಂದ ಎಬ್ಬಿಸಬೇಕು. ಹಾಗೆಯೇ ಅವನನ್ನು ಹೊರಡಿಸಲು ಸಾಧ್ಯವಿಲ್ಲ. ಅದು ನಿಯಮ. ಅದಕ್ಕಾಗಿ ಯುವಕರು ಸಂಪೂರ್ಣ ಸಮಾಜವನ್ನು ಬದಲಾಯಿಸಬೇಕು. ಮೌಲ್ಯಗಳನ್ನು ಕೂಡ ಬದಲಾಯಿಸಬೇಕು ಎಂದು ತಿಳಿಸಿದರು. 

ಹೆಚ್.ಸಿ.ದಾಸಪ್ಪ ಮತ್ತು ಯಶೋಧರಾ ದಾಸಪ್ಪ ಇಬ್ಬರೂ ದೇಶಭಕ್ತರು. ಬಹಳ ಅನ್ಯೋನ್ಯವಾಗಿದ್ದವರು. ಕರ್ನಾಟಕದಲ್ಲಿ ಹಾಸುಹೊಕ್ಕಾಗಿ ಕೆಲಸ ಮಾಡಿದವರು. ಸಜ್ಜನರು, ಗೌರವಾನ್ವಿತ ವ್ಯಕ್ತಿಗಳು, ಬಡತನವನ್ನಪ್ಪಿಕೊಂಡು ಕಷ್ಟಕ್ಕೆ ಸಿಲುಕಿದರೂ ಕೂಡ ಧೈರ್ಯಗೆಡದೇ ಸಮಾಜಕ್ಕೆ ಸ್ಫೂರ್ತಿಯಾಗಿ ಕೆಲಸ ಮಾಡಿದರು. ಅಂಥಹವರ ತತ್ವ ಆದರ್ಶಗಳನ್ನು ಯುವ ಜನತೆ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರಲ್ಲದೇ, ಅವರ ಜೀವನ ಹೇಗಿತ್ತೆಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಕಾರ್ಯಕ್ರಮದಲ್ಲಿ ಶಾಸಕ ವಾಸು, ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ಡಿ.ಭಾರತಿ, ಡಾ.ಬಾಬೂ ಜಗಜೀವನ್ ರಾಮ್ ಅಧ್ಯಯನ ಕೇಂದ್ರದ ನಿರ್ದೆಶಕ ಪ್ರೊ.ಕೆ.ಸದಾಶಿವ, ಹೆಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯ ಅಧ್ಯಕ್ಷೆ ಸರೋಜ ತುಳಸಿದಾಸ್, ಗಾಂಧಿಭವನ ಬೆಂಗಳೂರಿನ ಪ್ರೊ.ಜಿ.ಬಿ.ಶಿವರಾಜು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News