ಮೈಸೂರಿಗೆ ಪ್ರಧಾನಿ ಮೋದಿ ಆಗಮನದ ಹಿನ್ನಲೆ: ನಗರದಲ್ಲೆಡೆ ಪೊಲೀಸರ ಕಟ್ಟೆಚ್ಚರ

Update: 2018-02-17 16:18 GMT

ಮೈಸೂರು,ಫೆ.17: ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ನಗರದಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ನಗರದ ರೈಲ್ವೆ ನಿಲ್ದಾಣದಲ್ಲಿ ಫೆ.19 ರಂದು ಎಲೆಕ್ಟ್ರಿಕ್ ರೈಲು ಹಾಗೂ ಮೈಸೂರು ಉದಯ್‍ಪುರ್ ಸಿಟಿ ಪ್ಯಾಲೆಸ್ ಕ್ವೀನ್ ಹಮ್ ಸಫರ್ ರೈಲಿಗೆ ಚಾಲನೆ ನೀಡಿ ನಂತರ ನಗರದ ಮಹರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಫೆ.18 ರಾತ್ರಿ 11 ಗಂಟೆಗೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿಲಿದ್ದಾರೆ. ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಆತ್ಮೀಯವಾಗಿ ಬರಮಾಡಿಕೊಳ್ಳಲಿದ್ದಾರೆ. ಅಂದು ರಾತ್ರಿ ಮೈಸೂರಿನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯ ಹೂಡುವರು. ಅವರು ಉಳಿದುಕೊಳ್ಳುವ ಸ್ಥಳವನ್ನು ಗೌಪ್ಯವಾಗಿಡಲಾಗಿದೆಯಾದರೂ ಪಾರಂಪರಿಕ ಹೋಟೆಲ್ ಲಲಿತ್ ಮಹಲ್ ಪ್ಯಾಲೇಸ್‍ನಲ್ಲಿ ತಂಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ಬಂದು ಹೋಗುವ ಮಾರ್ಗ, ಅವರು ಉದ್ಘಾಟನೆ ಮಾಡುವ ಸ್ಥಳ ಹಾಗೂ ಸಮಾವೇಶದ ಸ್ಥಳಗಳಲ್ಲಿ ಈಗಾಗಲೇ ಪೊಲೀಸರು ಬೀಡು ಬಿಟ್ಟಿದ್ದು, ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಕಾಯುತ್ತಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಸಮಾವೇಶಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಬೇಕೆಂದು ಒಬ್ಬ ಯುವಕ ಪೊಲೀಸ್ ಸರ್ಪಗಾವಲನ್ನು ಬೇಧಿಸಿ ಪ್ರಧಾನಿಗಳ ಕಾರಿನ ಬಳಿ ತೆರಳಿದಿದ್ದು ದೊಡ್ಡ ಸಮಸ್ಯೆಯಾಗಿತ್ತು. ಹಾಗಾಗಿ ಪ್ರಧಾನಿಯ ಕಾರ್ಯಕ್ರಮಗಳಿಗೆ ಪೊಲೀಸರ ಅನುಮತಿ ಇಲ್ಲದೇ ಯಾವುದೇ ವ್ಯಕ್ತಿಗಳು ಹೋಗುವ ಹಾಗಿಲ್ಲ, ಜೊತೆಗೆ ಬಿಜೆಪಿಯ ನಾಯಕರಿಗೂ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ನಾಲ್ಕೈದು ದಿನಗಳ ಹಿಂದೆಯೇ ಮೈಸೂರಿಗೆ ಆಗಮಿಸಿರುವ ಎಸ್‍ಪಿಜಿ ತಂಡ ಎಲ್ಲಾ ಪರಿಶೀಲನೆಯಲ್ಲಿ ತೊಡಗಿದೆ. 

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ 40*60 ಅಳತೆಯಲ್ಲಿ ವೇದಿಕೆ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದ್ದು, ಈಗಾಗಲೇ ಎಸ್.ಪಿ.ಜಿ. ಸಿಬ್ಬಂದಿಗಳು ಕಳೆದ ನಾಲ್ಕು ದಿನಗಳಿಂದ ವಿವಿಧ ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಸಮಾವೇಶದ ವೇದಿಕೆಯನ್ನು  ಪರಿಶೀಲನೆ ಮಾಡುತ್ತಿದ್ದಾರೆ. ಶ್ವಾನ ದಳ,ಭಯೋತ್ಪಾದಕ ನಿಗ್ರಹ ದಳ ಸೇರಿದಂತೆ ಇತರೆ ಭದ್ರತಾ ಸಿಬ್ಬಂದಿಗಳು ತಪಾಸಣೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ  ಸಿಎಂ ಸಿದ್ದರಾಮಯ್ಯನವರ ತವರಿನಲ್ಲಿ ಚುನಾವಣೆ ಕಹಳೆ ಮೊಳಗಿಸಲು ಸಿದ್ಧರಾಗಿದ್ದು, ಈ ಬಿಜೆಪಿ ಸಮಾವೇಶ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಅನುಕೂಲ ಅಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News