ಮೋದಿ-ಅಮಿತ್ ಶಾ ಕಪಿಮುಷ್ಠಿಯಲ್ಲಿ ಬಿಜೆಪಿ: ಮಾಜಿ ಸಚಿವ ವಿಜಯಶಂಕರ್ ವಾಗ್ದಾಳಿ

Update: 2018-02-17 16:36 GMT

ಮೈಸೂರು,ಫೆ.17: ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಪಕ್ಷ ಪ್ರಧಾನಿ ಮೋದಿ-ಅಮಿತ್ ಶಾ ಕಪಿ ಮುಷ್ಟಿಯಲ್ಲಿದ್ದು, ಅವರ ಸರ್ವಾಧಿಕಾರಿ ಧೋರಣೆಯಿಂದ ಪಕ್ಷ ಕಟ್ಟಿ ಬೆಳೆಸಿದ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಅಟಲ್ ಬಿಹಾರಿ ವಾಜಪೇಯಿಯಂತಹ ಮಹಾನ್ ಮುತ್ಸದಿಗಳೇ ಮೂಲೆಗುಂಪಾಗಿದ್ದಾರೆ ಎಂದು ಮಾಜಿ ಸಚಿವ ಸಿ.ಎಚ್.ವಿಜಯ ಶಂಕರ್ ಗಂಭೀರ ಆರೋಪ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಕಾಂಗ್ರೆಸ್ ಸೇರಿದ ಬಳಿದ ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ವಿರುದ್ಧ ನೇರ ವಾಗ್ದಾಳಿ ನಡೆಸಿ, ಬಿಜೆಪಿ ನಾಯಕರು ಪಕ್ಷದಲ್ಲಿ ಉಳಿಯಬೇಕಾದರೆ ಅಮಿತ್ ಶಾಗೆ ಶರಣಾಗಬೇಕು. ಮಂಡಿಯೂರಿ ಶರಣಾಗದಿದ್ದರೆ ಅಂತವರಿಗೆ ಬಿಜೆಪಿಯಲ್ಲಿ ಉಳಿಗಾಲವಿಲ್ಲ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ಅಮಿತ್ ಶಾ ಬಂದ ವೇಳೆ ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಕೂಡ ಅಮಿತ್ ಶಾ ಮುಂದೆ ಮಂಡಿಯೂರಿದರು ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಹಗಲುಗನಸು. ಕಳೆದ ಬಾರಿಯ ಬಿಜೆಪಿ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ, ನಿಷ್ಟಾವಂತರನ್ನು ಸಂಪುಟದಿಂದ ಕೈ ಬಿಡಲಾಯಿತು. ನಾಯಕರು ಜೈಲಿಗೆ ಹೋದರು. ಇದೆಲ್ಲವೂ ರಾಜ್ಯ ಬಿಜೆಪಿಯ ಹೆಗ್ಗಳಿಕೆ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಲೆಂದೇ ಬರುತ್ತಾರೆ. ಆದರೆ ಪ್ರಧಾನಿ ಮೋದಿಯವರು 2014ರ ಚುನಾವಣಾ ಪೂರ್ವದಲ್ಲಿ ದೇಶಕ್ಕೆ ನೀಡಿದ ಆಶ್ವಾಸನೆಗಳೇನಾಯಿತು ? ಭಷ್ಟಾಚಾರ, ಭಯೋತ್ಪಾದನೆ ನಿರ್ಮೂಲನೆ, ವಿದೇಶಿ ಬ್ಯಾಂಕ್ ಗಳಿಂದ ಕಪ್ಪು ಹಣ ವಾಪಾಸ್ ತರುವುದು, ನಿರುದ್ಯೋಗ ನಿರ್ಮೂಲನೆ ಏನಾಯಿತು? ಈ ಬಗ್ಗೆ ದೇಶದ ಜನತೆ ಭ್ರಮನಿರಸರಾಗಿದ್ದಾರೆ ಎಂದರು. 

ಸಮರ್ಪಕ ಲೋಕಪಾಲ್ ಮಸೂದೆ ಮಂಡನೆ, ಗಂಗಾ ಕಾವೇರಿ ನದಿ ಜೋಡಣೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಮಾಂಸ ರಫ್ತು ನಿಷೇಧ ಬಗ್ಗೆ ನೀಡಿದ ಆಶ್ವಾಸನೆಗಳ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟಪಡಿಸಲಿ. ಇದೊಂದು ರೈತ ಹಾಗೂ ಗ್ರಾಮೀಣಾಭಿವೃದ್ಧಿ ವಿರೋಧಿ ಸರ್ಕಾರವೆಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸರ್ವ ಶಿಕ್ಷಣ ಯೋಜನೆಯಡಿ ಅಟಲ್ ಜೀ ಯವರ ಅವಧಿಯಲ್ಲಿ ಕೇಂದ್ರದ ಪಾಲು ಶೇ. 100% ರಷ್ಟಿತ್ತು. ಆದರೆ ಈಗ ಕೇಂದ್ರದ ಪಾಲು 30% ಕ್ಕೆ ಇಳಿದಿದೆ. ಇತ್ತೀಚೆಗೆ ಈ ಯೋಜನೆಯಡಿಯಲ್ಲಿ ಒಂದೇ ಒಂದು ಶಾಲಾ ಕೊಠಡಿ ನಿರ್ಮಿಸಲಾಗಿಲ್ಲ. ಮಾಜಿ ಪ್ರಧಾನಿ ಅಟಲ್ ಜೀ ಯವರೇ ಕೊಟ್ಟಿದ್ದ ಕಾರ್ಯಕ್ರಮಗಳನ್ನೇ ವ್ಯವಸ್ಥಿತವಾಗಿ ಮುಂದುವರೆಸಲಾಗದ ಭಂಡ ಸರ್ಕಾರ ಎಂದು ಆರೋಪಿಸಿದರು .

ರೈತ ಬೆಳೆದ ಉತ್ಪನ್ನ, ಕಾಫಿ, ಶುಂಠಿ, ತಂಬಾಕು ಮೇಲೆ ತೆರಿಗೆ ಹಾಕಿದ್ದಾರೆ. ಸೇವಾ ತೆರಿಗೆ ಹಾಕಿದ ಮೊದಲ ಸರ್ಕಾರ ಮೋದಿ ಸರ್ಕಾರ. ಕೇಂದ್ರ ಸರ್ಕಾರಕ್ಕೆ ಸಾಮಾಜಿಕ ನ್ಯಾಯವೇ ಗೊತ್ತಿಲ್ಲ. ಸಂಪುಟದಲ್ಲಿ ವೀರಶೈವರಿಗೂ ಸ್ಥಾನ ನೀಡಿಲ್ಲ, ಮುಸ್ಲಿಮರಿಗೂ ಅನ್ಯಾಯವಾಗಿದೆ ಎಂದು ಕಿಡಿಕಾರಿದರು. 

ಮೋದಿ ಹೃದಯ ಹೀನ ಪ್ರಧಾನಿ: ಪ್ರಧಾನಿ ಮೋದಿ ಹೃದಯ ಹೀನ. ಸಂಪುಟದಲ್ಲಿರುವ ಮಹಿಳಾ ಸಹೋದ್ಯೋಗಿಗಳಿಗೂ ಗೌರವ ನೀಡುವುದಿಲ್ಲ. ಪತ್ನಿಗೂ ಗೌರವ ನೀಡುವುದಿಲ್ಲ. ಗಂಡನ ಶ್ರೇಯಸ್ಸಿಗಾಗಿ ಅಂಜನಾದ್ರಿಯಲ್ಲಿ ಹರಕೆ ತೀರಿಸಿದ ಯಶೋಧ ಬೇನ್ ಅಪಘಾತಕ್ಕೀಡಾದಾಗಲೂ ಔಪಚಾರಿಕವಾಗಿಯೂ ದೂರವಾಣಿ ಮೂಲಕ ಮಾತನಾಡದ ಹೃದಯ ಹೀನ ಎಂದು ಹೇಳಿದರು.

ಜಗತ್ತು ಸುತ್ತುವಲ್ಲಿ ಮೋದಿ ಹೆಸರುವಾಸಿ. ಆದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ರನ್ನ ಗುಮಾಸ್ತರ ರೀತಿ ನೋಡುತ್ತಿದ್ದಾರೆ. ನೀವೂ ಒಬ್ಬರೇ ಟೂರ್ ಹೊಡೆದು ಬರುತ್ತೀರಿ. ಅವರಿಗೆ ಇಲ್ಲಿಯೇ ಕುಳಿತು ಆ ಬಗ್ಗೆ ನಿರ್ಣಯ ಕೈಗೊಳ್ಳಿ ಎಂದು ಹೇಳುತ್ತೀರಿ. ಹಿರಿಯ ರಾಜಕಾರಣಿ ಸುಷ್ಮಾ ಸ್ವರಾಜ್‍ಗೆ ಬೆಲೆ ಇಲ್ಲವಾಗಿದೆ ಎಂದು ಮೋದಿ ಹಾಗೂ ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿಯವರು ಫೆ.19ರಂದು ನಗರಕ್ಕೆ ಆಗಮಿಸುತ್ತಿರುವ ಉದ್ದೇಶವೇನೆಂದು ಸ್ಪಷ್ಟಪಡಿಸಿಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಉತ್ತಮ ಸ್ಥಿರ ಸರ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮ್ಯಯನವರು ನೀಡಿದ್ದು, ಉತ್ತಮ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಅವರೇ ಮುಂದೆ ಅಧಿಕಾರಕ್ಕೆ ಬರುವರು ಎಂದು ಭವಿಷ್ಯ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ  ನಗರ ಕಾಂಗ್ರೆಸ್ ಅಧ್ಯಕ್ಷ ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ, ಕಾಂಗ್ರೆಸ್ ಮುಖಂಡ ಶಿವಣ್ಣ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News