ವಿಧಾನಸಭಾ ಚುನಾವಣೆಗೆ 1.32 ಲಕ್ಷ ಶಾಯಿಯ ಬೇಡಿಕೆ: ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್ ಮಾಹಿತಿ

Update: 2018-02-17 16:51 GMT

ಮೈಸೂರು,ಫೆ.17: ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ 10 ಮಿ.ಲೀ ನ 1.32 ಲಕ್ಷ ಬಾಟಲ್ ಶಾಯಿಗೆ ರಾಜ್ಯ ಚುನಾವಣಾ ಅಯೋಗ ಬೇಡಿಕೆ ಇಟ್ಟಿದೆ ಎಂದು ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ನಿಗಮದ ಅಧ್ಯಕ್ಷ ಎಚ್.ಎ.ವೆಂಕಟೇಶ್ ತಿಳಿಸಿದರು.

ನಗರದ ಕಾರ್ಖಾನೆಯ ಅವರ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಯಿಂದ ತಯಾರಾಗು ಶಾಯಿಗೆ ದೇಶ ಹಾಗೂ ವಿದೇಶದಲ್ಲಿ ಬೇಡಿಕೆ ಇದ್ದು, ಈಗಾಗಲೇ ದೇಶದಲ್ಲಿ ಎಲ್ಲಿ ಚುನಾವಣೆಗಳು ನಡೆದರೂ ಮೈಸೂರಿನ ಬಣ್ಣವನ್ನು ಬಳಸಲಾಗುವುದು ಎಂದು ಹೇಳಿದರು.

ಈ ಬಾರಿಯ ವಿಧಾನಸಭಾ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ 1.32 ಲಕ್ಷ ಶಾಯಿಗಳನ್ನು ನೀಡುವಂತೆ ಕೇಳಿದೆ. ಇದರ ಒಟ್ಟು ಮೊತ್ತ 2 ಕೋಟಿ ರೂ. ಗಳಾಗಿದೆ. ಹಾಗಾಗಿ ಒಂದು ತಿಂಗಳಲ್ಲಿ ನಾವು ಅವರು ಕೇಳಿರುವ ಅಷ್ಟೂ ಶಾಯಿಗಳನ್ನು ಸಿದ್ಧಪಡಿಸಲಾಗುವುದು ಎಂದರು.

ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ 1937 ರಲ್ಲಿ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೆ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದು, ನಿಗದಿತ ಅವದಿಯೊಳಗೆ ಎಲ್ಬೇಲಾಡಿಕೆಗಳನ್ನು ಈಡೇರಿಸಿದೆ. ಈ ಶಾಯಿಯ ಗುಣಮಟ್ಟವನ್ನು ಅರಿತು ಮಲೇಶಿಯಾ ಅಲ್ಲಿನ ಲೋಕಸಭಾ ಚುನಾವಣೆಗೆ 60 ಮಿ.ಲೀ.ನ 1 ಲಕ್ಷ ಬಾಟಲ್‍ಗಳನ್ನು ನೀಡುವಂತೆ ಕೇಳಿದೆ ಎಂದು ಹೇಳಿದರು.

ಹಿಂದೆ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮಾರ್ಕರ್ ಪೆನ್ನ್ ಮಾದರಿಯ 794 ಪೆನ್ನ್ ಗಳನ್ನು ನೀಡಲಾಗಿತ್ತು. ಈ ಬಾರಿ 10 ಮಿ.ಲೀನ ಬಾಟಲ್‍ಗಳನ್ನು ನೀಡಲಾಗುವುದು. ಒಂದು ಬಾಟಲ್ 700 ಜನರಿಗೆ ಉಪಯೋಗವಾಗಲಿದೆ ಎಂದು ವೆಂಕಟೇಶ್ ಹೇಳಿದರು.

ನಮ್ಮ ಕಾರ್ಖಾನೆ ಉತ್ತಮವಾಗಿ ನಡೆದು ಕೊಂಡು ಬರುತ್ತಿದ್ದು, 2017-18 ನೇ ಸಾಲಿನಲ್ಲಿ 6.35 ಕೋಟಿ ರೂ. ಲಾಭಗಳಿಸಿದ್ದು, ಮುಂಬರುವ 2018-19 ನೇ ಸಾಲಿನಲ್ಲಿ 7 ಕೋಟಿ ಲಾಭಗಳಿಸುವ ಗುರಿ ಹೊಂದಲಾಗಿದೆ ಎಂದರು. ನಾವು ಗಳಿಸುವ ಲಾಭಾಂಶದ ಶೇ.25 ರಷ್ಟು ಡಿವಿಡೆಂಡ್ ಅನ್ನು ರಾಜ್ಯ ಸರಕಾರಕ್ಕೆ ನೀಡಲಾಗುತ್ತಿದ್ದು. ಈ ಬಾರಿ 25 ಲಕ್ಷ ರೂ. ಡಿವಿಡಂಡ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಡಾ.ಚಂದ್ರಶೇಖರ ದೊಡ್ಡಮನಿ, ಪ್ರಧಾನ ವ್ಯವಸ್ಥಾಪಕ ಸಿ.ಹರಕುಮಾರ್,  ಕಾರ್ಖಾನೆ ಅಧಿಕಾರಿಗಳಾದ ವೇಣುಗೋಪಾಲ್, ಅಶ್ವತ್ಥಪ್ಪಣ್ಣ, ನಾರಾಯಣ, ನಾಗಭೂಷಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News