ಪೌರಕಾರ್ಮಿಕರನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು: ಶಾಸಕ ಸುಧಾಕರ್

Update: 2018-02-17 16:55 GMT

ಚಿಕ್ಕಬಳ್ಳಾಪುರ,ಫೆ.17: ಪೌರ ಕಾರ್ಮಿಕರನ್ನು 2ನೇ ದರ್ಜೆಯ ಪ್ರಜೆಗಳಂತೆ ನೋಡುವುದನ್ನು ಬಿಟ್ಟು, ಪ್ರಥಮ ದರ್ಜೆಯ ಪ್ರಜೆಗಳಂತೆ ಕಾಣಬೇಕು. ಅಲ್ಲದೆ ಸಮಾಜದಲ್ಲಿ ಹೆಚ್ಚು ಗೌರವವನ್ನು ನೀಡಬೇಕೆಂದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ ಕೆ. ಸುಧಾಕರ್ ಹೇಳಿದರು.

ಇಂದು ಸಫಾಯಿ ಕರ್ಮಚಾರಿ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ, ಸಫಾಯಿ ಕರ್ಮಚಾರಿಗಳ, ಮ್ಯಾನುಯಲ್ ಸ್ಕ್ಯಾವೆಂಜರುಗಳ ವೃತ್ತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ, 2013ರಡಿ ಸರ್ಕಾರದ ಕಾನೂನುಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ತಲೆಮೇಲೆ ಮಲಹೊರುವ ಅನಿಷ್ಟ ಪದ್ದತಿಯನ್ನು ಸಂವಿಧಾನದ ಮೂಲಕ ನಿಷೇಧ ಮಾಡಲಾಗಿದೆ. ಆದರೂ ಕೂಡಾ ಇಂತಹ ಪ್ರಸಂಗಗಳು ಅಲ್ಲಲ್ಲಿ ಈಗಲೂ ಬೆಳಕಿಗೆ ಬರುತ್ತಿವೆ. ನಗರಗಳು ಶುದ್ದವಾಗಿರಬೇಕಾದರೆ ಪೌರಕಾರ್ಮಿಕರೇ ಮುಖ್ಯ ಕಾರಣ ಎಂದರು.

ಪೌರ ಕಾರ್ಮಿಕರು ತಾವು ಕೆಲಸ ಮಾಡುವ ಸಮಯದಲ್ಲಿ ಸುರಕ್ಷಿತ ಪರಿಕರಗಳನ್ನು ಬಳಸಬೇಕು. ಸರ್ಕಾರ ಪೌರಕಾರ್ಮಿಕರಿಗೆ ಈಗಾಗಲೇ ಗೃಹಭಾಗ್ಯ ಯೋಜನೆಯಡಿ 7ಲಕ್ಷ ರೂಗಳ ಸಹಾಯಧನವನ್ನು ನೀಡುತ್ತಿದೆ. ಅಲ್ಲದೇ, ಚಿಕ್ಕಬಳ್ಳಾಪುರದಲ್ಲಿ 40 ಎಕರೆ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಲಾಗಿದ್ದು, ಈಗಾಗಲೇ ಅದರಲ್ಲಿ 21 ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಲು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದರು.

ಕರ್ನಾಟಕ ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿ, ರಾಜ್ಯ ಮ್ಯಾನುಯಲ್ ಸ್ಕ್ಯಾವೆಂಜರುಗಳ ಮೇಲ್ವಿಚಾರಣಾ ಸಮಿತಿಯ ಸದಸ್ಯರು ಮತ್ತು ರಾಜ್ಯ ಸಂಚಾಲಕರಾದ ಎಂ. ಪದ್ಮ ರವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯಲ್ಲಿ  ಮಲಹೊರುವ ಕಾರ್ಮಿಕರ ಕುಟುಂಬವನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಬೇಕು. ಮಲಹೊರುವ ಅಮಾನವೀಯ ಕೃತ್ಯ, ಗುಲಾಮಗಿರಿ ಪದ್ದತಿಗಳಂತಹ ಅನಿಷ್ಟ ವೃತ್ತಿಗಳಿಂದ ಹೊರ ತರುವ ಗುರಿಯನ್ನು ಅಧಿಕಾರಿಗಳು ಹೊಂದಬೇಕು. ಮ್ಯಾನುಯಲ್ ಸ್ಕ್ಯಾವೆಂಜರುಗಳ ವೃತ್ತಿ ನಿಷೇಧ 2013ರಲ್ಲಿ ಕಾನೂನು ಬದ್ದವಾಗಿ ಕಾಯ್ದೆ ತಿದ್ದುಪಡಿಯಾಗಿದೆ. ಆದ್ದರಿಂದ ಪೌರಕಾರ್ಮಿಕರೆಲ್ಲರೂ ಒಗ್ಗಟ್ಟಾಗಿ ಹೋರಾಡಿ ನ್ಯಾಯಸಮ್ಮತವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ರಾಷ್ಟ್ರೀಯ ಕಾನೂನು ಶಾಲೆಯ ಸಂಶೋಧನಾ ಸಲಹೆಗಾರರಾದ ಡಾ. ಆರ್. ವಿ. ಚಂದ್ರಶೇಖರ್  ರವರು ಮಾತನಾಡಿ, ಮ್ಯಾನುಯಲ್ ಸ್ಕ್ಯಾವೆಂಜರುಗಳು ಕೂಡಾ ಮನುಷ್ಯರೇ, ಅವರನ್ನು ಮನುಷ್ಯರಂತೆ ಕಾಣಬೇಕು. ಸಮಾಜದಲ್ಲಿ ಜಾತಿ ಶೋಷಣೆ ಮಾಡುವುದರ ಜೊತೆಗೆ ಮನುಷ್ಯ ಶೋಷಣೆಯಂತಹ ಅನಿಷ್ಟ ಪದ್ದತಿಯನ್ನು ಮೊದಲು ತೊಡೆದು ಹಾಕಬೇಕು. ಸಫಾಯಿ ಕರ್ಮಚಾರಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ  ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆದರೆ ಎಷ್ಟೋ ಪೌರಕಾರ್ಮಿಕರಿಗೆ ಈ ಬಗ್ಗೆ ಅರಿವು ಇಲ್ಲದೇ ಇರುವುದು ಬೇಸರದ ಸಂಗತಿಯಾಗಿದೆ. ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಸರ್ಕಾರಿ ವಸತಿ ಶಾಲೆಗಳಲ್ಲಿ ಉಚಿತ ಮತ್ತು ನೇರ ಪ್ರವೇಶ ನೇಮಕಾತಿ, ಅನೈರ್ಮಲ್ಯ ವಿದ್ಯಾರ್ಥಿವೇತನ, ಗುತ್ತಿಗೆ ಮತ್ತು ಖಾಯಂ ಎರಡೂ ವರ್ಗದ ಕಾರ್ಮಿಕರಿಗೆ ವಸತಿ ಸೌಲಭ್ಯ, ಸ್ವಯಂ ಉದ್ಯೋಗ ಪಡೆಯಲು ಸಹಾಯಧನ ಮುಂತಾದ ಅನೇಕ ಸೌಲಭ್ಯಗಳಿದ್ದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. 

ರಾಜ್ಯ ಮ್ಯಾನುಯಲ್ ಸ್ಕ್ಯಾವೆಂಜರುಗಳ ಮೇಲುಸ್ತುವಾರಿ ಸಮಿತಿಯ ರಾಜ್ಯಾಧ್ಯಕ್ಷರು, ಸಫಾಯಿ ಕರ್ಮಚಾರಿಗಳ ಸಮಿತಿಯ ಸದಸ್ಯರಾದ ಕೆ.ಬಿ.ಓಬಳೇಶ್ ಮಾತನಾಡಿ, ಸಪಾಯಿ ಕರ್ಮಚಾರಿಗಳಿಗೆ ಹಾಗೂ ಸ್ಕ್ಯಾವೆಂಜರ್‍ಗಳಿಗೆ ಇರುವ ಕಾಯಿದೆಗಳು, ಅವುಗಳಿಂದ ಆಗುವ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಮ್ಯಾನುಯಲ್ ಸ್ಕ್ಯಾವೆಂಜರುಗಳು ಬಡತನ ಮತ್ತು ಅಭದ್ರತೆಯ ಕಾರಣದಿಂದ ಮಲವನ್ನು ಸ್ವಚ್ಚ ಮಾಡುತ್ತಿರುತ್ತಾರೆ. ಜತೆಗೆ 2013ರ ಸಫಾಯಿ ಕರ್ಮಚಾರಿಗಳ/ಮ್ಯಾನುಯಲ್ ಸ್ಕ್ಯಾವೆಂಜರುಗಳ ವೃತ್ತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ ಬಗ್ಗೆ ಪೌರಕಾರ್ಮಿಕರಿಗೆ ಅಧಿಕಾರಿಗಳು ಸಂಪೂರ್ಣವಾಗಿ ತಿಳಿಸಬೇಕೆಂದರು. ಈ ಕಾಯಿದೆಯ ಮಲಹೊರುವ ಪದ್ದತಿ ನಿಷೇಧ, ಮಲಹೊರುವ ವೃತ್ತಿಯಿಂದ ಬಿಡುಗಡೆಗೊಳಿಸಿ ಪುನರ್ವಸತಿ ಕಲ್ಪಿಸಬೇಕು ಹಾಗೂ ಕಾಯಿದೆಯನ್ನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ ವಿಧಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‍ನ ಪ್ರಭಾರ ಅಧ್ಯಕ್ಷರಾದ ಪಿ. ನಿರ್ಮಲ ಮುನಿರಾಜು, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ. ಮುನಿಯಪ್ಪ, ತಾಲೂಕು ಪಂಚಾಯತ್‍ನ ಅಧ್ಯಕ್ಷ ರಾಮಸ್ವಾಮಿ, ಜಿಲ್ಲಾ ಪಂಚಾಯತ್‍ನ ಸಾಮಾಜಿಕ ನ್ಯಾಯ ಸಮತಿಯ  ಅಧ್ಯಕ್ಷ ನರಸಿಂಹಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News