ಚಿಕ್ಕಬಳ್ಳಾಪುರ: ನಿವೇಶನ ರಹಿತರಿಗೆ ವಾರದಲ್ಲಿ ನಿವೇಶನ ಟೋಕನ್; ಡಾ.ಕೆ ಸುಧಾಕರ್

Update: 2018-02-17 17:12 GMT

ಚಿಕ್ಕಬಳ್ಳಾಪುರ,ಫೆ.17: ನಗರ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಒಟ್ಟು 6,800 ಫಲಾನುಭವಿಗಳಿಗೆ ಮುಂದಿನ ಒಂದು ವಾರದೊಳಗೆ ನಿವೇಶನ ಹಂಚಿಕೆಯ ಟೋಕನ್ ವಿತರಿಸಿ, ನಂತರ ಜೂನ್‍ನಲ್ಲಿ ಎಲ್ಲರಿಗೂ ನಿವೇಶನದ ಹಕ್ಕುಪತ್ರ ವಿತರಿಸಲಾಗುವುದು ಎಂದು ಶಾಸಕ ಡಾ.ಕೆ. ಸುಧಾಕರ್ ತಿಳಿಸಿದರು.

ನಗರಸಭೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಾನಾ ಕಾರ್ಯಕ್ರಮಗಳಡಿ ಅಡುಗೆ ಅನಿಲ ಸೌಲಭ್ಯ ಹಾಗೂ ವಾಜಪೇಯಿ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರಗಳನ್ನು ವಿತರಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್‍ನಲ್ಲಿ ನೀತಿ ಸಂಹಿತೆ ಜಾರಿಯಾಗಲಿದ್ದು, ಅದಕ್ಕೂ ಮುನ್ನವೇ ನಿವೇಶನ ಹಂಚಿಕೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ನಿವೇಶನಕ್ಕಾಗಿ ನಗರವ್ಯಾಪ್ತಿಯಲ್ಲಿ ಈಗಾಗಲೇ 40 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಜೊತೆಗೆ ಅಡವಿಗೊಲ್ಲವಾರಹಳ್ಳಿಯಲ್ಲಿ 24 ಎಕರೆ ಜಮೀನು ಗುರುತಿಸಿದ್ದು, ಇದರಿಂದ ಒಟ್ಟು 64 ಎಕರೆ ಭೂಮಿ ಸಿದ್ಧವಿದೆ ಎಂದರು.

ನಗರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ 50 ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಾರಂಭಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರವೇ ಕಾಮಗಾರಿಗಳು ಆರಂಭವಾಗಲಿವೆ. ನಗರದ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಸ್ಯಾಟಲೈನ್ ನಗರ ನಿರ್ಮಾಣಕ್ಕೂ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ಮಹಿಳೆಯರು ಸೀಮೆಎಣ್ಣೆ, ಉರುವಲಿನಿಂದ ಅಡುಗೆ ಮಾಡುವುದನ್ನು ತಪ್ಪಿಸುವ ಜೊತೆಗೆ ಪರಿಸರ ರಕ್ಷಣೆ ಉದ್ದೇಶದಿಂದ ಸರ್ಕಾರ ಪ್ರತಿ ಕುಟುಂಬಕ್ಕೂ ಅನಿಲಭಾಗ್ಯ ಕಲ್ಪಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲೂ ಈ ಯೋಜನೆ ಅನುಷ್ಠಾನ ಮಾಡುತ್ತಿದ್ದು, ಸುಂದರ ಹಾಗೂ ಸುರಕ್ಷಿತ ನಗರವನ್ನಾಗಿಸಲು ನಾಗರಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಜನತೆಗೆ ನೀಡಿದ್ದ 165 ಭರವಸೆಗಳಲ್ಲಿ ಈಗಾಗಲೇ 160ಕ್ಕೂ ಹೆಚ್ಚು ಭರವಸೆ ಈಡೇರಿಸಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ 2 ಲಕ್ಷ ಕೋಟಿ ಮೊತ್ತದ 13ನೇ ಬಜೆಟ್‍ನಲ್ಲಿ ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದರು.

454 ಮಂದಿಗೆ ಅನಿಲ ಭಾಗ್ಯ

ಕಾರ್ಯಕ್ರಮದಲ್ಲಿ 454 ಕುಟುಂಬಗಳಿಗೆ ಅಡುಗೆ ಅನಿಲ ಸೌಲಭ್ಯ ಹಾಗೂ 42 ಮಂದಿ ಫಲಾನುಭವಿಗಳಿಗೆ ವಸತಿ ಕಾರ್ಯಾದೇಶ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್, ನಗರಸಭೆ ಅಧ್ಯಕ್ಷ ಮುನಿಕೃಷ್ಣ,
ಉಪಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ.ಮುನಿಯಪ್ಪ, ಎಪಿಎಂಸಿ ಅಧ್ಯಕ್ಷ ಗೋವಿಂದಸ್ವಾಮಿ, ಪೌರಾಯುಕ್ತ ಉಮಾಕಾಂತ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News