ಮಂಡ್ಯ: ಬಜೆಟ್‍ನಲ್ಲಿ ನಿರ್ಲಕ್ಷ್ಯ ಆರೋಪಿಸಿ ಬಿಸಿಯೂಟ ನೌಕರರ ಪ್ರತಿಭಟನೆ

Update: 2018-02-17 17:45 GMT

ಮಂಡ್ಯ, ಫೆ.17: ರಾಜ್ಯ ಸರಕಾರದ ಬಜೆಟ್‍ನಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಅಕ್ಷರದಾಸೋಹ ನೌಕರರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಅವರು, ವೇತನ ಹೆಚ್ಚಳ ಸೇರಿ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಕೆಲವು ದಿನಗಳ ಹಿಂದೆ ಅನಿರ್ಧಿಷ್ಟಾವಧಿ ಧರಣಿ ನಡೆಸಿದೆವು. ಈ ವೇಳೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆದವು. ಆದರೆ, ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಅವರು ಕಿಡಿಕಾರಿದರು.

ಬಜೆಟ್ ಮಂಡನೆಯಲ್ಲಿ ವೇತನ ಹೆಚ್ಚಳವಾಗದ ವಿಚಾರ ನೋಡಿ ಸರಕಾರದ ಮೇಲಿನ ವಿಶ್ವಾಸದಿಂದ ಧರಣಿ ಹಿಂಪಡೆದ ಬಿಸಿಯೂಟ ನೌಕರರಿಗೆ ದೊಡ್ಡ ಆಘಾತವಾಗಿದೆ. ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಸುಮಾರು 1.20 ಲಕ್ಷ ಬಿಸಿಯೂಟ ಮಹಿಳಾ ನೌಕರರ ಗೌರವಧವನ್ನು ಕೂಡಲೇ ಹೆಚ್ಚಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಮಾತಿನ ಚಕಮಕಿ: ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ, ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ರಾಜೇಶ್ ಮನವಿ ಸ್ವೀಕರಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಎಸ್.ಸುನೀತಾ, ಕೆ.ಎಂ.ಸುನಂದ, ಎಂ.ಲಕ್ಷ್ಮಿ, ಪುಟ್ಟಮ್ಮ, ವೆಂಕಲಕ್ಷ್ಮಮ್ಮ, ಪುಷ್ಪ, ಜಯಲಕ್ಷ್ಮಿ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News