ಅಪಘಾತ ಪ್ರಕರಣಗಳಲ್ಲಿ ಭಾರತ 6ನೆ ಸ್ಥಾನ: ಮೀರಾ ಶಿವಲಿಂಗಯ್ಯ

Update: 2018-02-17 17:47 GMT

ಮಂಡ್ಯ, ಫೆ.17: ನಗರದ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಭವನದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ರೆಡ್‍ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಚಾಲಕರಿಗೆ ಅಂಬೇಡ್ಕರ್ ಕಾರ್ಮಿಕ ಸಹಾಯಾಸ್ತ ಯೋಜನೆಯಡಿ ಅಪಘಾತ ಜೀವ ರಕ್ಷಕ ತರಬೇತಿ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ವಿಶ್ವದಾದ್ಯಂತ ಸಂಭವಿಸುವ ರಸ್ತೆ ಅಪಘಾತ ಪ್ರಕರಣಗಳಲ್ಲಿ ಭಾರತ ಆರನೇ ಸ್ಥಾನವನ್ನು ಹೊಂದಿದೆ. ಅಪಘಾತ ಸಂಭವಿಸಿದ ಒಂದು ಗಂಟೆಯೊಳಗೆ ಸೂಕ್ತ ಚಿಕಿತ್ಸೆ ದೊರೆತರೆ ಸುಮಾರು ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜೀವಗಳನ್ನು ರಕ್ಷಣೆ ಮಾಡಬಹುದು ಎಂದರು.

ಚಾಲಕರು ಅಪಘಾತ ಸಂಭವಿಸಿದಾಗ ರಕ್ಷಿಸುವ ಹಂಬಲವಿದ್ದರೂ ಪ್ರಥಮ ಚಿಕಿತ್ಸೆ ಕುರಿತು ಅರಿವು ಇರುವುದಿಲ್ಲ. ಈ ಬಗ್ಗೆ ತಿಳಿವಳಿಕೆಯಿದ್ದರೆ ಅಪಾಯದಲ್ಲಿದ್ದವರನ್ನು ಪ್ರಾಣಾಪಾಯದಿಂದ ರಕ್ಷಿಸಬಹುದು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ಕಾರ್ಮಿಕ ಅಧಿಕಾರಿ ಎಂ.ಎನ್.ದೇವರಾಜು ಮಾತನಾಡಿ, ಶೇ.92 ರಷ್ಟಿರುವ ಅಸಂಘಟಿತ ಕಾರ್ಮಿಕರಿಗೆ ಸರಕಾರ ಅಸಂಘಟಿತ ಸಾಮಾಜಿಕ ಭದ್ರತಾ ಕಾಯಿದೆ ಜಾರಿಗೊಳಿಸಿದೆ. ಇದಕ್ಕೆ ಕೃಷಿ ಕಾರ್ಮಿಕರು ಸೇರಿದಂತೆ 37 ವರ್ಗಗಳು ಸೇರುತ್ತವೆ. ಈ ಕಾರ್ಮಿಕರಿಗೆ ವಿಮಾ ಹಣವನ್ನು 5 ಲಕ್ಷ ರೂ.ಗೆ ಹೆಚ್ಚಿಸಿದೆ. ಸಂಬಂಧಿಸಿದ ದಾಖಲೆ ನೀಡಿದರೆ 5 ಲಕ್ಷ ರೂ. ತಕ್ಷಣ ದೊರೆಯಲಿದೆ. ಚಾಲಕರು ಈ ಯೋಜನೆ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ರೆಡ್‍ಕ್ರಾಸ್ ಸಂಸ್ಥೆಯ ಕೆ.ಟಿ.ಹನುಮಂತು, ರಂಗಸ್ವಾಮಿ, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News