ಮಕ್ಕಳ ಸಾವಿಗೆ ಪೆಂಟಾವೆಲೆಂಟ್ ಲಸಿಕೆ ಕಾರಣವಲ್ಲ: ಎಇಎಫ್‍ಐ ಸಮಿತಿ ವರದಿ ಸ್ಪಷ್ಟನೆ

Update: 2018-02-17 17:49 GMT

ಮಂಡ್ಯ, ಫೆ.17: ತಾಲೂಕಿನ ಚಂದಗಿರಿದೊಡ್ಡಿಯ ಎರಡು ಮಕ್ಕಳ ಸಾವಿಗೆ ಆರೋಗ್ಯ ಇಲಾಖೆ ನೀಡಿದ ಪೆಂಟಾವೆಲೆಂಟ್ ಲಸಿಕೆ ಕಾರಣವಲ್ಲ ಎಂದು ಫೆ.16 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಎಇಎಫ್‍ಐ ಸಮಿತಿ ಸಭೆ ಹೇಳಿದೆ.

ನಿಮೋನಿಯದಿಂದ ಒಂದು ಮಗು ಹಾಗೂ ಸೋಂಕಿ(ಸೆಪ್ಸಿಸ್)ನಿಂದ ಮತ್ತೊಂದು ಮಗು ಮರವಣವೊಂದಿದೆ. ಇನ್ನೊಂದು ಮಗುವಿನ ಮರಣೋತ್ತರ ವರದಿ ಬಂದ ನಂತರ ಕಾರಣ ನಿರ್ಧರಿಸಲಾಗುತ್ತದೆ ಎಂದು ಸಮಿತಿ ಪ್ರತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ ಸರಕಾರದ ಅಧಿಕಾರಿಗಳು ಇದೇ ಬ್ಯಾಚ್‍ನ ಲಸಿಕೆಯನ್ನು ಬೇರೆ ರಾಜ್ಯಗಳಿಗೆ ಸರಬರಾಜು ಮಾಡಲಾಗಿದ್ದು, ಅಲ್ಲಿ ಯಾವುದೇ ಎಇಎಫ್‍ಐ ಪ್ರಕರಣಗಳು ನಡೆದಿಲ್ಲವೆಂದು ಧೃಢಪಡಿಸಿರುತ್ತಾರೆ ಎಂದು ಸಮಿತಿ ಸ್ಪಷ್ಟಪಡಿಸಿದೆ. ಅಲ್ಲದೇ ಕರ್ನಾಟಕ ರಾಜ್ಯದಲ್ಲಿ ಸುಮಾರು 40,000 ಡೋಸ್ ಲಸಿಕೆಯನ್ನು ಮಕ್ಕಳಿಗೆ ನೀಡಲಾಗಿದ್ದು, ಯಾವುದೇ ದುರ್ಘಟನೆ ನಡೆದಿರುವುದಿಲ್ಲ. ಪೆಂಟಾವೆಲೆಂಟ್ ಲಸಿಕೆಯು ಸುರಕ್ಷಿತವಾಗಿದ್ದು, ಲಸಿಕೆ ತೆಗೆದುಕೊಳ್ಳುವುದನ್ನು ಮುಂದುವರೆಸಬಹುದೆಂದು ಸಮಿತಿಯು ಅಭಿಪ್ರಾಯಪಟ್ಟಿದೆ.

ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಸಂಭವಿಸಿರುವ ಶಿಶುಮರಣಕ್ಕೆ ಕಾರಣವೆಂದು ಶಂಕಿಸಲಾದ ಬ್ಯಾಚ್ ಸಂಖ್ಯೆಯ ಪೆಂಟಾವಲೆಂಟ್ ಲಸಿಕೆಯನ್ನು ಜಿಲ್ಲೆಯಾದ್ಯಂತ ಸ್ಥಗಿತಗೊಳಿಸಲಾಗಿದ್ದು, ಮುಂದಿನ ಬ್ಯಾಚ್ ಸಂಖ್ಯೆಯ ಪೆಂಟಾವೆÀಲೆಂಟ್ ಲಸಿಕೆಯು ಜಿಲ್ಲೆಗೆ ಬಂದ ನಂತರ ಲಸಿಕಾ ಕಾರ್ಯಕ್ರಮದಲ್ಲಿ ಪೆಂಟಾವಲೆಂಟ್ ಲಸಿಕೆಯನ್ನು ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.8 ರಂದು ಆರೋಗ್ಯ ಇಲಾಖೆ ವತಿಯಿಂದ ನೀಡಲಾದ ಪೆಂಟಾವಲೆಂಟ್ ಲಸಿಕೆಯಿಂದ ಚಂದಗಿರಿದೊಡ್ಡಿಯ ಎರಡು ತಿಂಗಳ ಪ್ರೀತಂ ಮತ್ತು ಭುವನ್ ಮರಣಹೊಂದಿದ್ದು, ಇತರೆ ಏಳು ಮಕ್ಕಳು ಅಸ್ವಸ್ಥಗೊಂಡಿವೆ ಎಂದು ಆರೋಪಿಸಿ ಪ್ರತಿಭಟನೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News