ಮಂಡ್ಯ: ಕಾವೇರಿ ಹೋರಾಟಗಾರರ ವಿರುದ್ಧ ಪ್ರಕರಣ ಹಿಂಪಡೆಯಲು ಒತ್ತಾಯ

Update: 2018-02-17 18:05 GMT

ಮಂಡ್ಯ, ಫೆ.17: ಕಾವೇರಿ ಚಳವಳಿಯಲ್ಲಿ ಪಾಲ್ಗೊಂಡಿದ್ದವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ರಾಜ್ಯ ಸರಕಾರ ಹಿಂದಕ್ಕೆ ಪಡೆಯಲು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.

ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ಅಂತಿಮ ತೀರ್ಪಿನ ಹಿನ್ನೆಲೆಯಲ್ಲಿ ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಜಿ.ಮಾದೇಗೌಡರ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ನಡೆಯಿತು. ಸುಪ್ರೀಂಕೋರ್ಟ್ ತೀರ್ಪಿನಿಂದ ಸ್ವಲ್ಪ ಸಮಾಧಾನವಾಗಿದೆ. ಆದರೆ, ಸಂಕಷ್ಟ ಸೂತ್ರ ಹಂಚಿಕೆ ಬಗ್ಗೆ ಪ್ರಸ್ತಾಪ ಇಲ್ಲವೆಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

ಸುಪ್ರೀಂಕೋರ್ಟ್ ತೀರ್ಪು ಅಂತಿಮವಾಗುವ ಸಂಭವವಿದ್ದು, ಇರುವ ನೀರನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ಹಲವರು ಸಲಹೆ ನೀಡಿದರು. ಇದುವರೆಗೂ ರೈತ ಹಿತರಕ್ಷಣಾ ಸಮಿತಿಯು ಕೇವಲ ಕಾವೇರಿ ಹೋರಾಟ ಹೊರತುಪಡಿಸಿ ಇತರೆ ರೈತರಿಗೆ ಅರಿವು ಮೂಡಿಸುವಂತಹ ಕೆಲಸ ಮಾಡಿಲ್ಲವೆಂದು ಕೆಲವು ಸಂಘಟನೆಗಳ ಮುಖಂಡರು ತರಾಟೆಗೆ ತೆಗೆದುಕೊಂಡರು.

ಇನ್ನುಮುಂದೆ ರಾಜ್ಯದ ಪಾಲಿನ ನೀರಿನ ಬಳಕೆ ಬಗ್ಗೆ ರೈತರಿಗೆ ಅರಿವು ನೀಡಲು ವ್ಯಾಪಕ ಕಾರ್ಯಕ್ರಮ ಮಾಡಿಕೊಳ್ಳಬೇಕು. ಚಳವಳಿಗಾರರ ವಿರುದ್ಧ ಹೂಡಿರುವ ಪ್ರಕರಣಗಳ ಹಿಂಪಡೆಯಲು ಸರಕಾರಕ್ಕೆ ಒತ್ತಾಯಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.

ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ತೀರ್ಪು ಸಮಾಧಾನ ತಂದಿದ್ದರೂ ಸಂಕಷ್ಟ ಸೂತ್ರ ರೂಪಿಸಿಲ್ಲ. ಈ ಬಗ್ಗೆ ಸಂಸತ್‍ನಲ್ಲಿ ಹೋರಾಟ ಮಾಡುವುದಾಗಿ ಭರವಸೆ ನೀಡಿದರು.

ರಾಜ್ಯಪರ ವಾದಿಸಿದ ನಾರಿಮನ್ ನೇತೃತ್ವದ ವಕೀಲರ ತಂಡ, ರಾಜ್ಯ ಸರಕಾರ ಮತ್ತು ನೀರಾವರಿ ಸಚಿವರು, ನಿರಂತರ ಹೋರಾಟ ನಡೆಸಿದ ಸಂಘಟನೆಗಳ ಸದಸ್ಯರನ್ನು ಅಭಿನಂದನೆ ಸಲ್ಲಿಸಲಾಯಿತು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ, ರೈತಸಂಘದ ಕೆ.ಬೋರಯ್ಯ, ಸುಧೀರ್‍ಕುಮಾರ್, ಸುನಂದಜಯರಾಂ, ದಸಂಸ ಎಂ.ಬಿ.ಶ್ರೀನಿವಾಸ್ ಸೇರಿದಂತೆ ಹಲವು ಸಂಘಟನೆಗಳ ಮತ್ತು ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News