ಶ್ರೀರಂಗಪಟ್ಟಣ: ರಜನಿಕಾಂತ್ ಹೇಳಿಕೆ ಖಂಡಿಸಿ ಪ್ರತಿಭಟನೆ

Update: 2018-02-17 18:09 GMT

ಶ್ರೀರಂಗಪಟ್ಟಣ, ಫೆ.17:  ಕಾವೇರಿ ತೀರ್ಪಿನ ವಿರುದ್ದ ರಜನಿಕಾಂತ್ ನೀಡಿರುವ ಹೇಳಿಕೆ ಖಂಡಿಸಿ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ರಜನಿಕಾಂತ್ ಭಾವಚಿತ್ರದ ಪ್ರತಿಗಳನ್ನು ಸುಟ್ಟು ಪ್ರತಿಭಟಿಸಿದರು.

ಪಟ್ಟಣದ ಕುವೆಂಪು ವೃತ್ತದ ಮೈಸೂರು ಬೆಂಗಳೂರು ಹೆದ್ಧಾರಿಯ ಬಳಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಜಮಾಯಿಸಿ ನಟ ರಜನಿಕಾಂತ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ನೆಲದಲ್ಲಿ ಹುಟ್ಟಿ ಬೆಳೆದು ತಮಿಳುನಾಡಿನ ಪರ ಮಾತನಾಡುವುದು ಸರಿಯಲ್ಲ. ಕಳೆದ 50 ವರ್ಷಗಳಿಂದ ರಾಜ್ಯಕ್ಕೆ ಕಾವೇರಿ ನೀರಿನ ಬಗ್ಗೆ ಅನ್ಯಾಯವಾಗುವುದರ ಬಗ್ಗೆ ಒಂದು ಬಾರಿಯೂ ಚಕಾರ ಎತ್ತದ ರಜನಿ, ಒಂದು ಬಾರಿ ರಾಜ್ಯಕ್ಕೆ ಸಮಾಧಾನಕರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ತಮಿಳುನಾಡಿಗೆ ಅನ್ಯಾಯವಾಗಿದೆ, ಮತ್ತೊಂದು ಬಾರಿ ಪರಾಮರ್ಶೆ ನಡೆಸಿ ತೀರ್ಪು ನೀಡಬೇಕು ಎಂದು ಹೇಳಿಕೆ ನೀಡಿರುವುದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರುನಾಡಿನಲ್ಲಿ ಜನಿಸಿ ಕರುನಾಡಿಗೆ ದ್ರೋಹವೆಸಗುವ ಹೇಳಿಕೆಯಿಂದ ರಾಜ್ಯದ ಜನರಿಗೆ ನೋವುಂಟು ಮಾಡಿದೆ. ಕೂಡಲೇ ಕರ್ನಾಟಕದ ಜನರಿಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ರಜನಿಕಾಂತ್ ನಟಿಸಿದ ಚಿತ್ರಗಳನ್ನು ಬಿಡುಗಡೆ ಮಾಡದಿರುವಂತೆ ಆಗ್ರಹಿಸಿದ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು, ಇದು ಹೀಗೆ ಮುಂದುವರಿದು ಹೇಳಿಕೆಗಳನ್ನು ನೀಡಿದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶಂಕರ್ ಬಾಬು, ಬಾಳೇ ಮಂಜು, ಅಜಯ್, ಅಶೋಕ್ ಶೆರಿದಂತೆ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News