ಕಾರನ್ನು ತಡೆದು ಶಾಸಕ ಜಿಗ್ನೇಶ್ ಮೇವಾನಿಯನ್ನು ಹೊರಗೆಳೆದ ಗುಜರಾತ್ ಪೊಲೀಸರು!

Update: 2018-02-18 10:17 GMT

ಅಹ್ಮದಾಬಾದ್, ಫೆ.18: ಪ್ರತಿಭಟನಾ ಸಭೆಯೊಂದಕ್ಕೆ ತೆರಳುತ್ತಿದ್ದ ವೇಳೆ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಯವರ ಕಾರನ್ನು ತಡೆದ ಪೊಲೀಸರು ಜಿಗ್ನೇಶ್ ರನ್ನು ಹೊರಗೆಳೆದಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ರವಿವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಶೆಹ್ಲಾ ರಶೀದ್ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದರಲ್ಲಿ ಪಾಲ್ಗೊಳ್ಳಲು ಜಿಗ್ನೇಶ್ ತೆರಳುತ್ತಿದ್ದರು. “ಅನಾಗರಿಕ ರೀತಿಯಲ್ಲಿ ಕಾರಿನಿಂದ ಹೊರಗೆಳೆಯಲಾಯಿತು ಹಾಗು ಕಾರಿನ ಕೀಯನ್ನು ಪೊಲೀಸರು ತುಂಡರಿಸಿದ್ದಾರೆ” ಎಂದು ಜಿಗ್ನೇಶ್ ಮೇವಾನಿ ಟ್ವಿಟರ್ ಹ್ಯಾಂಡಲ್ ನಲ್ಲಿ ತಿಳಿಸಲಾಗಿದೆ.

ಜವಾಹರ್ ಲಾಲ್ ವಿವಿ ವಿದ್ಯಾರ್ಥಿ ಯುನಿಯನ್ ನ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಈ ಬಗ್ಗೆ ವಿಡಿಯೋ ಸಹಿತ ಟ್ವೀಟ್ ಮಾಡಿದ್ದು, “ದಲಿತ ಹುತಾತ್ಮ ಭಾನು ಭಾಯ್ ಅವರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಜಿಗ್ನೇಶ್ ಮೇವಾನಿಯವರನ್ನು ಗುಜರಾತ್ ಪೊಲೀಸರು ತಡೆದಿದ್ದಾರೆ” ಎಂದಿದ್ದಾರೆ.

“ಭಾನು ಭಾಯ್ ಯವರ ಉದ್ದೇಶವನ್ನು ಬೆಂಬಲಿಸಿದ್ದಕ್ಕಾಗಿ ಅಹ್ಮದಾಬಾದ್ ಹಾಗು ಇತರೆಡೆಗಳಿಂದ ಆಗಮಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ” ಎಂದು ಜಿಗ್ನೇಶ್ ಟ್ವೀಟ್ ಮಾಡಿದ್ದಾರೆ.

“ನಾಚಿಕೆಗೇಡು… ಮೊದಲು ಅವರು ದಲಿತರಿಂದ ಭೂಮಿ ಕಸಿದುಕೊಂಡರು. ಆತ್ಮಹತ್ಯೆ ಮಾಡುವಂತೆ ಮಾಡಿದರು. ಈಗ ಅವರು ಜನಪ್ರತಿನಿಧಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ” ಎಂದು ಶೆಹ್ಲಾ ರಶೀದ್ ಟ್ವೀಟ್ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News