ಮಡಿಕೇರಿ: ನೂತನ ತಾಲೂಕು ಆಡಳಿತ ಭವನ ಉದ್ಘಾಟನೆ
ಮಡಿಕೇರಿ,ಫೆ.18: ಕೊಡಗು ಜಿಲ್ಲೆಯಲ್ಲಿ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ಬಾಕಿ ಉಳಿದಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಂ.ಆರ್.ಸೀತಾರಾಂ ಭರವಸೆ ನೀಡಿದ್ದಾರೆ.
ವಿರಾಜಪೇಟೆಯಲ್ಲಿ ನೂತನವಾಗಿ ನಿರ್ಮಿಸಿರುವ ತಾಲೂಕು ಆಡಳಿತ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿರಾಜಪೇಟೆ ತಾಲೂಕಿನಲ್ಲಿ 1530 ಅರ್ಜಿಗಳು ಬಾಕಿ ಇದ್ದು, ಇವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕಿದೆ ಎಂದರು.
ಮುಂದಿನ ದಿನಗಳಲ್ಲಿ ಸಿ ಮತ್ತು ಡಿ ಭೂಮಿಯಡಿಯೂ ಸಹ ಹಕ್ಕುಪತ್ರ ವಿತರಿಸಲು ಪ್ರಯತ್ನಿಸಲಾಗುವುದು. ಈ ಭಾಗದ ಜನರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಕೊಡಗು ಜಿಲ್ಲೆಗೆ 300 ಕೋಟಿಗೂ ಹೆಚ್ಚು ಅನುದಾನವನ್ನು ವಿಶೇಷ ಪ್ಯಾಕೇಜ್‍ನಡಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪರ ಪ್ರಯತ್ನದಿಂದ 94ಸಿ ಮತ್ತು 94ಸಿಸಿ ರಡಿ ಹಕ್ಕುಪತ್ರಗಳನ್ನು ಬಡವರಿಗೆ ವಿತರಿಸಲಾಗುತ್ತಿದೆ. ನಮ್ಮದು ‘ನುಡಿದಂತೆ ನಡೆಯುವ’ ಸರ್ಕಾರ ಎಂದು ಸಚಿವರು ಇದೇ ಸಂದರ್ಭ ತಿಳಿಸಿದರು.
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪೊನ್ನಪ್ಪ, ತಹಶೀಲ್ದಾರರಾದ ಗೋವಿಂದರಾಜು, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಜಿ.ಪಂ.ತಾ.ಪಂ.ಹಾಗೂ ಪಟ್ಟಣ ಪಂಚಾಯತ್ ಸದಸ್ಯರು ಹಾಜರಿದ್ದರು.