ದಾವಣಗೆರೆ: 4 ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳ ಸಭೆ
ದಾವಣಗೆರೆ,ಫೆ.18: ಮನೆ-ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಸಿ, 'ನಮ್ಮ ಕ್ಷೇತ್ರ ನಮ್ಮ ಹೊಣೆ' ಎಂಬ ಘೋಷವಾಕ್ಯದಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದೇವೆ ಎಂದು ಕೆಪಿಸಿಸಿ ಕಾರ್ಯದರ್ಶಿ ಬಲ್ಕೀಶ್ ಬಾನು ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ವೀಕ್ಷಕರಾಗಿ ಭಾಗವಹಿಸಿ ಅವರು ಮಾತನಾಡಿದರು.'ನಮ್ಮ ಕ್ಷೇತ್ರ ನಮ್ಮ ಹೊಣೆ' ಅಭಿಯಾನದ ಮೂಲಕ ಬೂತ್‍ಮಟ್ಟದಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಿದ್ದು, ಪ್ರತಿಯೊಬ್ಬರು ಕೆಲಸ ಮಾಡಿದರೆ ಗೆಲುವು ನಿಶ್ಚಿತ. ಈ ಮೂಲಕ ಬಿಜೆಪಿ ದುರಾಡಳಿತ, ಕಾಂಗ್ರೆಸ್ ಸರಕಾರದ ತಂದ ಜನಪರ ಯೋಜನೆ ಜನರಿಗೆ ಮುಟ್ಟಿಸಬೇಕು. ಅದಕ್ಕಾಗಿ ಕೇಡರ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.
ಕಾಂಗ್ರೆಸ್ ಮಾಸ್ ಪಕ್ಷವಾಗಿದ್ದು, ನನಗೆ 4 ಕ್ಷೇತ್ರ ಕೊಟ್ಟಿದ್ದಾರೆ. ನಮಗೆ ಇದೊಂದು ಅಸೈನ್‍ಮೆಂಟ್ ಆಗಿದ್ದರಿಂದ ಶ್ರಮವಹಿಸಿ ಕೆಲಸ ಮಾಡಬೇಕಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಾಗಿದೆ. ಈ ಹಿಂದೆ ನಡೆದ ಚುನಾವಣೆಯಲ್ಲಿ ಬೂತ್ ಆಯ್ಕೆ ಮಾಡಿಕೊಂಡು ಅವರ ಮೂಲಕ ಪ್ರಚಾರ ಮಾಡಲಾಗುತ್ತಿತ್ತು. ಹೀಗಾದಾಗ ಹಲವರಲ್ಲಿ ಮನಸ್ತಾಪ ಉಂಟಾಗುತ್ತಿತ್ತು. ಆದರೆ, ಈಗ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳೇ ಕೆಲಸ ಮಾಡಬೇಕಿದೆ. ಒಂದು ಕ್ಷೇತ್ರಕ್ಕೆ 230 ಬೂತ್‍ಗಳಿದ್ದು, 1 ಬೂತ್‍ಗೆ 100 ಮತ ಹೆಚ್ಚು ಪಡೆಯಬಹುದು. ಹೀಗಾದಾಗ 25,000 ಮತ ಹೆಚ್ಚಿಗೆ ಪಡೆಯಬಹುದು. ಇದಕ್ಕೆ ಜನರ ಮನವೊಲಿಸುವ ಕೆಲಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.
ಕ್ಷೇತ್ರದ ಹೊಣೆ ನಾಯಕರ ಮೇಲಿರುತ್ತದೆ. ತಮ್ಮ ಬೂತ್‍ಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ತಂದುಕೊಡುವ ಜವಾಬ್ದಾರಿ ನಾಯಕರಿಗೆ ನೀಡಲಾಗಿದೆ. ಪ್ರತಿ ಬೂತ್‍ನಲ್ಲಿ ಹೆಚ್ಚು ಮತ ಪಡೆಯಬೇಕೆಂಬ ಉದ್ದೇಶದಿಂದ `ನಮ್ಮ ಕ್ಷೇತ್ರ ನಮ್ಮ ಹೊಣೆ' ಎಂಬ ಅಭಿಯಾನ ಆರಂಭಿಸಲಾಗಿದೆ ಎಂದ ಅವರು, 1 ಕ್ಷೇತ್ರಕ್ಕೆ 50 ಮುಖಂಡರ ಸಂಪೂರ್ಣ ಮಾಹಿತಿ ಸಮಿತಿಗೆ ನೀಡಬೇಕು. ಅಲ್ಲದೆ, ರಾಜ್ಯಮಟ್ಟದ ನಾಯಕರು ನೀಡುವ ಹೇಳಿಕೆ ಪ್ರಚಾರ ಮಾಡಲು ವಾಟ್ಸಪ್ ಗ್ರೂಪ್ ರಚನೆ ಮಾಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮುಖಂಡ ವೀರಭದ್ರಪ್ಪ, ದೂಡಾ ಮಾಜಿ ಅಧ್ಯಕ್ಷ ಅಯ್ಯೂಬ್ ಪೈಲ್ವಾನ್ ಭಾಗವಹಿಸಿದ್ದರು.