×
Ad

ರ‍್ಯಾಫ್ಟಿಂಗ್ ತಂಡದಿಂದ ಪ್ರವಾಸಿಗರ ಮೇಲೆ ದೌರ್ಜನ್ಯ ಆರೋಪ: ಆರೋಪಿಗಳ ಬಂಧನಕ್ಕೆ ಎಸ್‍ಡಿಪಿಐ ಆಗ್ರಹ

Update: 2018-02-18 19:29 IST

ಮಡಿಕೇರಿ,ಫೆ.18: ಹೈದರಾಬಾದ್‍ನಿಂದ ಪ್ರವಾಸಕ್ಕೆ ಬಂದ ಪ್ರವಾಸಿಗರ ಮೇಲೆ ದುಬಾರೆಯ ರ‍್ಯಾಫ್ಟಿಂಗ್ ತಂಡ ದೌರ್ಜನ್ಯ ನಡೆಸಿದ ಪರಿಣಾಮ ಇತ್ತೀಚೆಗೆ ಪ್ರವಾಸಿಗನೊಬ್ಬ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದೆ.

ಕಳೆದ ಕೆಲವು ವರ್ಷಗಳಿಂದ ದುಬಾರೆ ರ‍್ಯಾಪ್ಟಿಂಗ್ ತಂಡ ಪ್ರವಾಸಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಾ ಬಂದಿದ್ದು, ಇದರ ಬಗ್ಗೆ ದೂರು ನೀಡಲು ಮುಂದಾದರೆ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯುತ್ತಿರುವ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ರಾಜಿ ಮಾಡುತ್ತಿದ್ದಾರೆ. ಈ ನಿರ್ಲಕ್ಷ್ಯ ಮನೋಭಾವದಿಂದಲೇ ಪ್ರವಾಸಿಗನ ಕೊಲೆಯಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿರುವ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಮೃತನ ಕುಟುಂಬಕ್ಕೆ ಸರಕಾರ ರೂ.25 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಕಾಣದ ಕೈಗಳು ರ್ಯಾಫ್ಟಿಂಗ್ ತಂಡಕ್ಕೆ ಬೆಂಬಲ ನೀಡುತ್ತಿರುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿದ್ದು, ದುಬಾರೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ರ್ಯಾಫ್ಟಿಂಗ್ ದಂಧೆ ನಡೆಯುತ್ತಿದೆ. ತಕ್ಷಣ ಜಿಲ್ಲಾಡಳಿತ ರ್ಯಾಫ್ಟಿಂಗ್ ನ್ನು ಕಾನೂನು ಬದ್ಧಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. 

ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡಲು ದುಬಾರೆಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನೇಮಿಸಬೇಕು, ರ್ಯಾಫ್ಟಿಂಗ್ ಗುತ್ತಿಗೆಯ ಟೆಂಡರ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು. ಪ್ರವಾಸಿತಾಣಗಳಲ್ಲಿ ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸಬೇಕು, ದುಬಾರೆ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿರುವ ಅಮೀನ್ ಮೊಹಿಸಿನ್, ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News