×
Ad

ಕೊಡಗು ರೈಲ್ವೆ ಯೋಜನೆ ವಿರೋಧಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ

Update: 2018-02-18 19:51 IST

ಮೈಸೂರು,ಫೆ.18: ಕೊಡಗು ರೈಲ್ವೆ ಯೋಜನೆ ವಿರೋಧಿಸಿ ಮೈಸೂರು ಕೊಡವ ಸಮಾಜ ಹಾಗೂ ಸಂಘ ಸಂಸ್ಥೆಗಳ ವತಿಯಿಂದ ಬಹೃತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.

ಭಾನುವಾರ ನಗರದ ದೇವರಾಜು ಅರಸು ಕುಸ್ತಿ ಕ್ರೀಡಾಂಗಣದಲ್ಲಿ ಬಹೃತ್ ಪ್ರತಿಭಟನಾ ಸಭೆ ನಡೆಸಿ ಬಳಿಕ ರ್ಯಾಲಿ ನಡೆಸಿದ ರೈಲ್ವೆ ವಿರೋಧಿ ಹೋರಾಟ ವೇದಿಕೆ, ಹತ್ತಾರು ಕೊಡವ ಸಮಾಜಗಳು ಸೇರಿದಂತೆ 26ಕ್ಕೂ ಹೆಚ್ಚು ಸಂಘಟನೆಗಳು ವಿವಿಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಯೋಜನೆಯಿಂದ ಕೊಡಗಿನನೈಸರ್ಗಿಕ ಸಂಪತ್ತು ನಾಶವಾಗುತ್ತದೆ. ಕೊಡಗಿನ ಜನರಿಗೂ ಪ್ರಕೃತಿಗೂ ಭಾವನಾತ್ಮಕ ಸಂಬಂಧವಿದೆ. ಈ ನೈಸರ್ಗಿಕ ಭಾವನಾತ್ಮಕ ಸಂಪರ್ಕವನ್ನು ರೈಲ್ವೆ ಯೋಜನೆ ಕಡಿತಗೊಳಿಸುತ್ತದೆ. ಅಲ್ಲದೆ ಈ ಯೋಜನೆಯಿಂದ ದಕ್ಷಿಣ ಜೀವ ಗಂಗೆಯಾದ ಕಾವೇರಿ ನದಿ ಪಾತ್ರದ ಜನರಿಗೆ ತೀವ್ರ ತೊಂದರೆಯಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೈಗೊಳ್ಳಬಾರದು ಎಂದು ಆಗ್ರಹಿಸಿದರು.

ಕೇವಲ ರೈಲು ಮಾರ್ಗಕ್ಕಾಗಿ ಲಕ್ಷಾಂತರ ಮರಗಳ ಮಾರಣ ಹೋಮ ನಡೆಸುವುದು ಸರಿಯಲ್ಲ. ಯಾಂತ್ರಿಕ ಜೀವನಕ್ಕಾಗಿ ಅರಣ್ಯ ನಾಶ ಸಲ್ಲದು. ಹಲವು ವರ್ಷಗಳಿಂದ ಈ ಯೋಜನೆಯನ್ನು ವಿರೋಧ ಮಾಡುತ್ತಲೇ ಬಂದಿದ್ದರೂ ಕೇಂದ್ರ ಸರ್ಕಾರ ರೈಲು ಮಾರ್ಗ ಮಾಡಲು ಮುಂದಾಗಿದೆ. ಇದರಿಂದ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಒಂದು ವೇಳೆ ಯೋಜನೆ ಜಾರಿಯಾಗಿ ರೈಲು ಮಾರ್ಗ ನಿರ್ಮಾಣವಾದರೆ ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿಯಾದ ಕೊಡಗಿನ ನೈಸರ್ಗಿಕ ಸೌಂದರ್ಯ ಹಾಳಾಗುವುದಲ್ಲದೆ ಪ್ರಾಣಿ ಸಂಕುಲಗಳ ಉಳಿವಿಗೂ ಧಕ್ಕೆಯಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಜಾರಿ ಮಾಡಬಾರದು. ಒಂದು ವೇಳೆ ನಮ್ಮ ವಿರೋಧ ಧಿಕ್ಕರಿಸಿ ಯೋಜನೆ ಕೈಗೆತ್ತಿಕೊಂಡರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಮಾತನಾಡಿದ ಪರಿಸರ ಹೋರಾಟಗಾರ ಸುರೇಶ್ ಹೆಬ್ಳೀಕರ್, ಕೊಡಗು ಕರ್ನಾಟಕದ ವಾಟರ್ ಟವರ್ ಇದ್ದಹಾಗೆ. ಬೆಂಗಳೂರು ಸೇರಿ ಕಾವೇರಿ ಕಣಿವೆ ಜನರಿಗೆ ಜೀವನದಿಯಾಗಿರುವ ಕಾವೇರಿಯ ಉಗಮ ಸ್ಥಳವಾಗಿದ್ದು ಕೋಟ್ಯಂತರ ಜನರಿಗೆ ಜೀವಗಂಗೆ ನೀಡುವ ಭಾಗವಾಗಿದೆ. ಅಲ್ಲದೆ ಅರಣ್ಯ ಹಾಗೂ ವನ್ಯ ಜೀವಿಗಳ ಆವಾಸ ಸ್ಥಾನವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಕಾಡನ್ನು ಕಡಿಯುತ್ತಾ ಹೋದರೆ ಪರಿಸರ ನಾಶವಾಗುತ್ತದೆ. ಈಗಾಗಲೇ ಹವಾಮಾನ ವೈಪರೀತ್ಯದಿಂದ  ಗ್ಲೋಬಲ್ ವಾರ್ಮಿಂಗ್ ಹೆಚ್ಚಾಗುತ್ತಿದೆ. ರೈಲು ಯೋಜನೆ ಹೆಸರಿನಲ್ಲಿ ಕಾಡು ನಾಶ ಮಾಡಿದರೆ ಪರಿಸರ ನಾಶಕ್ಕೆ ನಾವೇ ನಾಂದಿಯಾಡಿದಂತಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೈಬಿಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ನೂರಾರು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕೊಡಗು ಸಮಾಜದವರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News