×
Ad

ಸೊರಬ: ಬ್ಲಾಕ್ ಕಾಂಗ್ರೆಸ್ ಬೂತ್ ಕಾರ್ಯಕರ್ತರ ಸಭೆ

Update: 2018-02-18 20:03 IST

ಸೊರಬ,ಫೆ.18: ಸಮಾಜವಾದದ ಸಿದ್ದಾಂತ ಹಾಗೂ ಅಹಿಂಸಾವಾದ ಕಾಂಗ್ರೆಸ್ ಪಕ್ಷದ ನಂಬಿಕೆಯಾಗಿದ್ದು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ತಿಳಿದರು.

ಪಟ್ಟಣದ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಂಡಿದ್ದ, ಸೊರಬ ಮತ್ತು ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಬೂತ್ ಅಧ್ಯಕ್ಷರ ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 

ಸಿದ್ದರಾಮಯ್ಯನವರು ಸಮಾಜವಾದಿ ಸಿದ್ದಾಂತದವರಾಗಿದ್ದರಿಂದ ಸಾಮಾನ್ಯ ಜನರ ಬದುಕಿಗೆ ಆಧಾರವಾಗಿರುವ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಯಿತು. ಮಾತೃ ಸ್ಥಾನದಲ್ಲಿರುವ ಮಹಿಳೆಯರನ್ನು ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50% ಮೀಸಲಾತಿ ಕಲ್ಪಿಸುವ ಮೂಲಕ ಪುರುಷರಷ್ಟೇ ಸಮಾನ ಸ್ಥಾನ ಕಲ್ಪಿಸಿದ್ದಾರೆ. ಪ್ರಸ್ತುತ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ತಂದು ಸ್ಥಾನ ಮಾನಗಳನ್ನು ನೀಡಿದ ಕೀರ್ತಿ ಸಿದ್ದರಾಮಯ್ಯನವರದ್ದಾಗಿದ್ದು, ಹಸಿವು ಮುಕ್ತ ರಾಜ್ಯ ಪರಿಕಲ್ಪನೆಯ ಆಧಾರದ ಮೇಲೆ ರಾಜ್ಯದ ನಾಲ್ಕು ಕೋಟಿ ಜನರಿಗೆ ಉಚಿತ ಅಕ್ಕಿ ತಲುಪುತ್ತಿದೆ. ಮಕ್ಕಳು ಶಕ್ತಿಯುತವಾಗಿ ಬೆಳೆಯಬೇಕೆಂದು ಕ್ಷೀರಭಾಗ್ಯ ಜಾರಿಗೆ ತಂದಿದ್ದು, ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಕೊಂಡ ತಕ್ಷಣವೇ ಬಡ ಜನರು ಸಾಲದ ಹೊರೆಯಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸುವಂತರಾಗಬೇಕೆಂದು ವಿವಿಧ ನಿಗಮಗಳಲ್ಲಿ ಪಡೆದಿದ್ದ ಸಾಲವನ್ನು ಮನ್ನಾ ಮಾಡಿದ್ದಾರೆ. ದುಡಿಯುವ ಕೈಗೆ ಸಮಾನ ಅವಕಾಶ ನೀಡಿ ನಿಜವಾದ ಸಮಾಜವಾದ ಸಿದ್ದಾಂತದ ಅಧಿಕಾರವನ್ನು ಕಾಂಗ್ರೆಸ್ ಮಾಡಿ ತೋರಿಸಿದೆ ಎಂದರು. 

ಶಕ್ತಿಯುತ ಸಂಸ್ಕೃತಿಯನ್ನು ನಮ್ಮ ದೇಶ ಹೊಂದಿದ್ದು, ಕಾಂಗ್ರೇಸ್ ರಾಷ್ಟ್ರದ ಸಂಸ್ಕೃತಿಯನ್ನು ಪಾಲಿಸಿಕೊಂಡು ಬಂದಿದೆ. ರಾಜ್ಯಕ್ಕೆ ಹೊಸತನ ತರುವಲ್ಲಿ ಬಜೆಟ್ ಅತ್ಯಂತ ಪರಿಣಾಮಕಾರಿಯಾಗಿದ್ದು, ಸಿದ್ದರಾಮಯ್ಯನವರು ಮಂಡಿಸಿರುವ ಮುಂಗಡ ಪತ್ರದಲ್ಲಿ ಎಲ್ಲಾ ವರ್ಗದವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದರು.

ಸೊರಬದಂತಹ ಹೋರಾಟದ ನೆಲದಿಂದಲೇ ಭೂಮಿ ಹಕ್ಕು ಕೊಡಿಸುವ ಕೆಲಸ ಪ್ರಾರಂಭ ಮಾಡಿದ್ದೇನೆ. ಅಧಿಕಾರಿಗಳನ್ನು ಎಚ್ಚರಿಸಿ ಸಾರ್ವಜನಿಕರ ಬಡವರ ಕೆಲಸ ಕಾರ್ಯಗಳನ್ನು ಮಾಡಿಸಿದ ತೃಪ್ತಿ ನನಗಿದೆ. ಸರ್ಕಾರದ ಸುತ್ತೋಲೆಯಂತೆ ವಾರಕ್ಕೊಮ್ಮೆ ಬಗರ್ ಹುಕುಂ ಸಮಿತಿ ಸಭೆ ಕರೆಯಬೇಕು. ಸಭೆ ನಡೆಸದ ಅಧಿಕಾರಿಗಳ ವಿರುದ್ಧ ಲಿಖಿತ ದೂರುಗಳು ಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಾಜಕೀಯ ಚುನಾವಣೆ ಮೇಲೆ ನಾನು ನಂಬಿಕೆ ಇಟ್ಟವನಲ್ಲ. ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಟ್ಟವನಾಗಿದ್ದು, ರಾಜ್ಯದಲ್ಲಿ ಸಾವಿರಾರು ಜನರಿಗೆ ಭೂಮಿ ಕೊಡಿಸಲು ಸಾಧ್ಯವಾಯಿತು ಎಂದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ತೀನಾ. ಶ್ರೀನಿವಾಸ್, ಉಪಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಬ್ಲಾಕ್ ಅಧ್ಯಕ್ಷರಾದ ಜೆ. ಶಿವಾನಂದಪ್ಪ, ಚೌಟಿ ಚಂದ್ರಶೇಖರ್ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಚಿಮಣೂರು, ತಾಲೂಕು ಮಹಿಳಾ ಅಧ್ಯಕ್ಷೆ ಸುಮಾ ಗಜಾನನ ಪ್ರಮುಖರಾದ ಸಿ.ವಿ. ರಾಜಪ್ಪ, ಯೋಗೇಶ್ವರಿ ವಿಜಯ್, ಕೆ. ಮಂಜುನಾಥ್, ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಚಂದ್ರಭೂಪಾಲ್, ಬಾಸೂರು ಚಂದ್ರೇಗೌಡ ಮತ್ತಿತರರಿದ್ದರು. 

       

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News