ಮೈಸೂರು: ಶಿಲಾನ್ಯಾಸ ವಿಚಾರಕ್ಕೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ

Update: 2018-02-18 14:49 GMT

ಮೈಸೂರು,ಫೆ.18: ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸಿ, ಘರ್ಷಣೆ ನಡೆದ ಘಟನೆ ಮೈಸೂರಿನಲ್ಲಿ ನಡೆದಿದೆ ಎನ್ನಲಾಗಿದೆ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಗೆಜ್ಜಗಳ್ಳಿಯಲ್ಲಿ ರವಿವಾರ ಗುದ್ದಲಿ ಪೂಜೆ ವಿಚಾರಕ್ಕೆ ಸಿಎಂ ಪುತ್ರ ಡಾ.ಯತೀಂದ್ರಾಗೆ ಜೆಡಿಎಸ್ ಕಾರ್ಯಕರ್ತರು ಘೆರಾವ್ ಹಾಕಿದ್ದರು. ಗುದ್ದಲಿ ಪೂಜೆ ಮಾಡದಂತೆ ಜೆಡಿಎಸ್ ಕಾರ್ಯಕರ್ತರು ಅಡ್ಡಿ ಪಡಿಸಿದ್ದು, ಗೆಜ್ಜಗಳ್ಳಿಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕ್ಷೇತ್ರದ ಶಾಸಕರಿಲ್ಲದೆ ಗುದ್ದಲಿ ಪೂಜೆ ಏಕೆ ಎಂದು ಜೆಡಿಎಸ್ ಕಾರ್ಯಕರ್ತರು ಯತೀಂದ್ರರನ್ನು ಪ್ರಶ್ನಿಸಿದ್ದಾರೆ. 15 ಲಕ್ಷ ವೆಚ್ಚ ದಲ್ಲಿ ಗೆಜ್ಜಗಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಯತೀಂದ್ರ ಮುಂದಾಗಿದ್ದರು. ಯತೀಂದ್ರಾಗೆ ಜೆಡಿಎಸ್ ಕಾರ್ಯಕರ್ತರು ಅಡ್ಡಿ ಮಾಡಿದ ಹಿನ್ನಲೆಯಲ್ಲಿ ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ ಎನ್ನಲಾಗಿದೆ. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತಗೊಳಿಸಲಾಗಿದ್ದು, ಡಾ.ಯತೀಂದ್ರ, ಕಾಂಗ್ರೆಸ್ ಮುಖಂಡ ಮರೀಗೌಡ ಸೇರಿದಂತೆ ಹಲವರು ಗುದ್ದಲಿ ಪೂಜೆ ಕೈ ಬಿಟ್ಟು ತೆರಳಿದ್ದಾರೆ. 

ಈ ಮಧ್ಯೆ ಸ್ಥಳೀಯ ಗ್ರಾ.ಪಂ. ಸದಸ್ಯನೊಬ್ಬನಿಗೆ ಪೊಲೀಸರು ದೌರ್ಜನ್ಯ ನಡೆಸಿದರು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಹಲವಾರು ಜೆಡಿಎಸ್ ಕಾರ್ಯಕರ್ತರು ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
 
ಸ್ಥಳೀಯ ಶಾಸಕರಿಲ್ಲದೆ ಏಕೆ ನೀವು ಗುದ್ದಲಿ ಪೂಜೆ ಮಾಡುತ್ತಿದ್ದೀರಿ, ನೀವೇನು ಜನಪ್ರತಿನಿಧಿಯೇ ಎಂದು ಯತೀಂದ್ರ ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದ ಕಾರಣ ಪೊಲೀಸ್ ಅಧಿಕಾರಿಯೊಬ್ಬರು ಗ್ರಾ.ಪಂ. ಸದಸ್ಯನಿಗೆ ದೌರ್ಜನ್ಯ ವೆಸಗಿದ್ದಾರೆ. ಹಾಗಾಗಿ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News