ಕಾಂಗ್ರೆಸ್‍ನಿಂದ ಮಾತ್ರ ಅಲ್ಪಸಂಖ್ಯಾತರ ರಕ್ಷಣೆ ಸಾಧ್ಯ: ರಫೀಕ್ ಅಹಮದ್

Update: 2018-02-18 17:40 GMT

ಮಂಡ್ಯ, ಫೆ.18: ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ರಕ್ಷಣೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಬೇರೆ ಪಕ್ಷಗಳು ರಾಜಕೀಯ ಶಕ್ತಿ ಕೊಡಲು ಮುಂದೆ ಬರುವುದಿಲ್ಲ ಎಂದು ಅಲ್ಪಸಂಖ್ಯಾತ ಕಾಂಗ್ರೆಸ್ ವಿಭಾಗದ ಮೈಸೂರು ವಿಭಾಗದ ಅಧ್ಯಕ್ಷ ರಫೀಕ್ ಅಹಮದ್ ಹೇಳಿದರು.

ನಗರದ ಬಂದೀಗೌಡ ಬಡಾವಣೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ಕಚೇರಿಯಲ್ಲಿ ರವಿವಾರ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.ಮೈಸೂರು ವಿಭಾಗದ 6 ಜಿಲ್ಲೆಗಳಲ್ಲಿ 32 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಮಂಡ್ಯ ಜಿಲ್ಲೆಯಲ್ಲಿ 16 ಬ್ಲಾಕ್‍ಗಳಿದ್ದು, ಅಲ್ಪಸಂಖ್ಯಾತರ ನಿರ್ಲಕ್ಷ್ಯ ಮಾಡುವುದಿಲ್ಲ. ಅಲ್ಪಸಂಖ್ಯಾತರ ಘಟಕದ ವತಿಯಿಂದಲೂ ಕನಿಷ್ಠ 10 ಸದಸ್ಯರನ್ನು ಬೂತ್ ಕಮಿಟಿಗೆ ಸೇರಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಜನಪರವಾದ ಕಾರ್ಯಕ್ರಮಗಳನ್ನು ಎಲ್ಲಾ ವರ್ಗದವರಿಗೆ ಕಲ್ಪಿಸಿದ್ದು, ಇವುಗಳ ಬಗ್ಗೆ ಅರಿವು ಮೂಡಿಸಿ ಮುಂದಿನ ಚುನಾವಣೆಯಲ್ಲೂ ಅಧಿಕಾರಕ್ಕೆ ತರಲು ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷ ರಫೀವುಲ್ಲಾ ಮಾತನಾಡಿದರು. ಮುಜಾಹಿದ್ ಅಲಿಖಾನ್, ಮುನ್ನಾ, ಮುಜಾಹಿದ್‍ಪಾಷ, ಖುರ್ರಂ ಪಾಷ, ಜಾಕೀರ್, ನಜೀರ್ ಅಹಮದ್, ಅರವಿಂದ್, ಸುಂಡಹಳ್ಳಿ ಮಂಜುನಾಥ್, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News