ಜಸ್ಟಿನ್ ಟ್ರುಡೊ ಗುಜರಾತ್ ಭೇಟಿಯ ವೇಳೆ ಮೋದಿ ಗೈರು: ಕೆನಡ ಮಾಧ್ಯಮಗಳ ಅಸಮಾಧಾನ

Update: 2018-02-19 09:08 GMT

ಹೊಸದಿಲ್ಲಿ, ಫೆ.19: ಭಾರತಕ್ಕೆ ಆಗಮಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಇಂದು ಗುಜರಾತ್ ಭೇಟಿಯಲ್ಲಿದ್ದರೂ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜತೆಗೆ ಕಾಣಿಸಿಕೊಂಡಿಲ್ಲ. ಚೀನಾ, ಜಪಾನ್ ಹಾಗೂ ಇಸ್ರೇಲ್ ಪ್ರಧಾನಿಗಳ ಗುಜರಾತ್ ಭೇಟಿಯ ವೇಳೆ ಅವರಿಗೆ ಸಾಥ್ ನೀಡಿದ್ದ ಪ್ರಧಾನಿ ಮೋದಿ ಟ್ರುಡೊಗೆ ಸಾಥ್ ನೀಡಲು ಬಯಸಿಲ್ಲ. ಅದರ ಬದಲು ಮುಂದಿನ ಕೆಲ ತಿಂಗಳುಗಳಲ್ಲಿ ಚುನಾವಣೆ ಎದುರಿಸಲಿರುವ ಕರ್ನಾಟಕಕ್ಕೆ ಅವರು ತೆರಳಲಿದ್ದಾರೆ.

ಜಸ್ಟಿನ್ ಟ್ರುಡೊ ಅವರು ಶುಕ್ರವಾರ ದಿಲ್ಲಿಯಲ್ಲಿ ಪ್ರಧಾನಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಆದರೆ ಟ್ರುಡೊ ಅವರ ಗುಜರಾತ್ ಭೇಟಿಯ ವೇಳೆ ಮೋದಿ ಹಾಜರಿರದೇ ಇರುವುದು ಕೆನಡಾದಲ್ಲಿನ ಸಿಖ್ ಉಗ್ರಗಾಮಿತ್ವ ಹಾಗೂ ಪ್ರತ್ಯೇಕ ಖಲಿಸ್ತಾನ ರಾಜ್ಯ ಬೇಡಿಕೆಗೆ ಆ ದೇಶ ಸೂಚಿಸಿರುವ ಬೆಂಬಲದ ಹಿನ್ನೆಲೆಯಲ್ಲಿ ಅವರಿಗೆ ಒಂದು ರೀತಿಯ ಅವಮಾನ ಮಾಡಿದಂತೆಯೇ ಸರಿ ಎಂದು ಕೆನಡಾ ಮಾಧ್ಯಮಗಳು ಬಿಂಬಿಸಿವೆ. ಆದರೆ ಸರಕಾರದ ಮೂಲಗಳು ಈ ವರದಿಗಳನ್ನು ತಳ್ಳಿ ಹಾಕಿದೆ.

ದೇಶಕ್ಕೆ ಭೇಟಿ ನೀಡುತ್ತಿರುವ ಎಲ್ಲಾ ಗಣ್ಯರಿಗೆ ಎಲ್ಲಾ ಕಡೆಯೂ ಪ್ರಧಾನಿ ಸಾಥ್ ನೀಡಬೇಕೆಂದೇನೂ ಇಲ್ಲ. ಅವರು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೈದರಾಬಾದ್ ನಗರಕ್ಕೂ ಭೇಟಿ ನೀಡಿದಾಗಲೂ ಹಾಜರಿರಲಿಲ್ಲ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಆದರೆ ತಮ್ಮ ತವರು ರಾಜ್ಯಕ್ಕೆ ಭೇಟಿ ನೀಡುವ ಗಣ್ಯರ ಜತೆಗೆ ಪ್ರಧಾನಿ ಕೂಡ ಹಾಜರಿರುವುದು ಇತ್ತೀಚಿಗಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಕಳೆದ ತಿಂಗಳು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಜರಾತ್ ಗೆ ಭೇಟಿ ನೀಡಿದಾಗ, ಕಳೆದ ವರ್ಷ ಜಪಾನ್ ಪ್ರಧಾನಿ ಶಿನ್ಝೊ ಅಬೆ ಹಾಗೂ 2014ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು 2014ರಲ್ಲಿ ಭೇಟಿ ನೀಡಿದಾಗಲೂ ಪ್ರಧಾನಿ ಮೋದಿ ಅವರ ಜತೆ ಹಾಜರಿದ್ದರೆಂಬುದನ್ನು ಇಲ್ಲಿ ಉಲ್ಲೇಖಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News