ಅಪಘಾತಕ್ಕೊಳಗಾದ ವ್ಯಕ್ತಿಗಳನ್ನು ರಕ್ಷಣೆ ಮಾಡಿ: ಪಿ.ಐ.ಶ್ರೀವಿದ್ಯಾ ಸಲಹೆ

Update: 2018-02-19 17:14 GMT

ಮಡಿಕೇರಿ, ಫೆ.19: ಅಪಘಾತಕ್ಕೆ ಒಳಗಾದ ವ್ಯಕ್ತಿಗಳನ್ನು ರಕ್ಷಣೆ ಮಾಡುವುದರೊಂದಿಗೆ ಅವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸಲಹೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಸೆಂಟ್ ಜಾನ್ಸ್ ಅಂಬುಲೆನ್ಸ್ ಸಂಸ್ಥೆ ಇವರ ಸಹಯೋಗದಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ‘ಅಪಘಾತ ಜೀವ ರಕ್ಷಕ’ ಯೋಜನೆಯಡಿ ಕಾರ್ಮಿಕ ಇಲಾಖೆಯ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸೋಮವಾರ ನಡೆದ ಖಾಸಗಿ ವಾಣಿಜ್ಯ ವಾಹನ ಚಾಲಕರ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು

ಅಪಘಾತಕ್ಕೊಳಗಾದ ವ್ಯಕ್ತಿಯನ್ನು ರಕ್ಷಣೆ ಮಾಡುವುದರಿಂದ ರಕ್ಷಣೆ ಮಾಡಿದ ವ್ಯಕ್ತಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ನ್ಯಾಯಾಲಯಕ್ಕೆ ಮತ್ತು ಪೊಲೀಸ್ ಠಾಣೆಗೆ ಸಾಕ್ಷಿಗಾಗಿ ಅಲೆಯಬೇಕಿಲ್ಲ. ನಿಶ್ಚಿಂತೆಯಿಂದ ಇರಬಹುದು. ಹಿಂದೆ ಇದರ ಬಗ್ಗೆ ತಿಳುವಳಿಕೆ ಇರಲಿಲ್ಲ. ಹಾಗೆಯೇ ಯಾವುದೇ ತರಬೇತಿಯು ಇರಲಿಲ್ಲ. ಅದರೆ ಇಂದು ತರಬೇತಿ ಇದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ತಿಳಿಸಿದರು.

ಒಂದು ಜೀವವನ್ನು ಕಾಪಡುವುದರಿಂದ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ. ಚಾಲಕರಿಗೆ ತರಬೇತಿ ಬಹಳ ಮುಖ್ಯ. ಅದ್ದರಿಂದ ಪ್ರತಿಯೊಬ್ಬ ಚಾಲಕರು ತರಬೇತಿಯಲ್ಲಿ ಭಾಗವಹಿಸಿ ಸರ್ಕಾರದ ಯೋಜನೆಗಳನ್ನು ಉಪಯೋಗಿಸಿಕೊಳ್ಳಿ. ತರಬೇತಿ ಮುಗಿದ ನಂತರ ಚಾಲಕರಿಗೆ ಪ್ರಥಮ ಚಿಕಿತ್ಸೆ ಬಾಕ್ಸ್ ಮತ್ತು ಪ್ರಮಾಣ ಪತ್ರ ನೀಡುತ್ತೇವೆ. ಹಾಗೆಯೇ ನೀವು ಅಧಿಕಾರಿಗಳಿಂದ ಕಾನೂನಿನ ನೆರವನ್ನು ಸಹ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ಮಾತನಾಡಿ, ಜನರಿಗೆ ಪ್ರಥಮ ಚಿಕಿತ್ಸೆ ಎಂದರೆ ಏನು ಎಂಬುದೆ ಕೆಲವರಿಗೆ ಗೊತ್ತಿಲ್ಲ. ಇದನ್ನು ಪ್ರತಿಯೊಬ್ಬ ಚಾಲಕನು ತಿಳಿದುಕೊಳ್ಳಬೇಕು. ಪ್ರಾಣ ಹೋಗುತ್ತಿರುವ ಜೀವನ್ನು ಉಳಿಸಿ, ಮನುಷ್ಯನಿಗೆ ಅಧಿಕಾರ ಮುಖ್ಯವಲ್ಲ, ಮನಷ್ಯತ್ವ ಬಹಳ ಮುಖ್ಯ. ಮೊದಲು ಮನುಷ್ಯರಾಗಿ ಎಂದು ಮಾನವೀಯ ಮಾತುಗಳನ್ನು ತಿಳಿಸಿದರು.

ಲೈಸನ್ಸ್ ಪಡೆಯಲು ಇನ್ನು ಮುಂದೆ ಕಡ್ಡಾಯವಾಗಿ ಕನಿಷ್ಠ 8 ನೇ ತರಗತಿ ಪಾಸಾಗಿರಬೇಕು. ಲೈಸನ್ಸ್ ಗೋಸ್ಕರ ಬಿಕ್ಷೆ ಬೇಡಬೇಡಿ. ನಿಮಗೆ ಮೊದಲು ಜ್ಞಾನದ ಅರಿವು ಮುಖ್ಯ ಎಂದರು. ಓದಲು ಪ್ರಯತ್ನಿಸಿದರೆ ನೀವುಗಳೆಲ್ಲ ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪಾಸ್ ಮಾಡಬಹುದು. ದೊಡ್ಡ ಅಧಿಕಾರಿ ಆಗಬಹುದು ಎಂದು ಚಾಲಕರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ತಿಳಿಸಿದರು.

ಮನುಕೂಲದ ಅಪಘಾತಗಳನ್ನು ತಪ್ಪಿಸಿ ಮತ್ತು ಇನ್ನೊಬ್ಬರಿಗೆ ಸಹಾಕರಿಸುವ ಮಾನವೀಯ ಗುಣಗಳನ್ನು ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು ಹಾಗೆಯೇ ಸರ್ಕಾರ ನಿಮಗೆ ಪ್ರಮಾಣ ಪತ್ರ  ನೀಡುತ್ತೆ ಅದರೆ ನಿಮಗೆ ಮೊದಲು ಬೇಕಿರುವುದು ಜ್ಞಾನದ ಅರಿವು ಬಹಳ ಮುಖ್ಯ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ತಿಳಿಸಿದರು.

ಸೆಂಟ್ ಜಾನ್ ಆಂಬುಲೆನ್ಸ್ ಸಂಸ್ಥೆಯ ವೈಧ್ಯಾಧಿಕಾರಿಗಳಾದ ಡಾ.ನರಸಿಂಹ, ಕಾರ್ಮಿಕ ಇಲಾಖೆ ಅಧಿಕಾರಿ ರಾಮಕೃಷ್ಣ, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರಾದ ಆರ್.ಶೀರಾಜ್ ಅಹ್ಮದ್ ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News