ಮಂಡ್ಯ: ವಿವಿಧ ಸಂಘಟನೆಗಳಿಂದ ಪುಟ್ಟಣ್ಣಯ್ಯಗೆ ಭಾವಪೂರ್ಣ ಶ್ರದ್ದಾಂಜಲಿ

Update: 2018-02-19 17:53 GMT

ಮಂಡ್ಯ, ಫೆ.19: ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಹಠಾತ್ ನಿಧನಕ್ಕೆ ಗಣ್ಯರು ಸೇರಿದಂತೆ ನಾನಾ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.

ಸಿಐಟಿಯು: ನಗರದ ಸಿಐಟಿಯು ಮತ್ತು ಪ್ರಾಂತ ಕೃಷಿಕೂಲಿಕಾರರ ಸಂಘದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಮುಖಂಡರು, ಪುಟ್ಟಣ್ಣಯ್ಯ ಅವರ ನಿಧನ ನಾಡಿನ ರೈತ ಸಮುದಾಯಕ್ಕೆ ಆಘಾತವನ್ನುಂಟು ಮಾಡಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರನ್ನು ಇನ್ನಷ್ಟು ಕೃಷಿ ಬಿಕ್ಕಟ್ಟಿಗೆ ನೂಕುತ್ತಿರುವ ಸಂದರ್ಭದಲ್ಲಿ ಪುಟ್ಟಣ್ಣಯ್ಯ ಅವರ ಸಾವು ನೋವಿನ ಸಂಗತಿಗೆಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಚಿಂತಕರಾದ ಪ್ರೊ.ಹುಲ್ಕೆರೆ ಮಹದೇವು, ನಾರಾಯಣ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎಂ.ಪುಟ್ಟಮಾದು, ಬಿ.ಹನುಮೇಶ್, ಎಂ.ರವೀಂದ್ರ, ನಾರಾಯಣ್, ಸ್ವಾಮಿ ಗಾಮನಹಳ್ಳಿ, ಕೆ.ಬಸವರಾಜು ಇತರರಿದ್ದರು.

ಕದಂಬ ಸೈನ್ಯ: ಕದಂಬ ಸೈನ್ಯದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಪುಟ್ಟಣ್ಣಯ್ಯ ಅವರು ವಿಧಾನಸಭೆಯಲ್ಲಿ ರೈತರ ಸಮಸ್ಯೆಗಳನ್ನು 223 ಶಾಸಕರಿಗೆ ತಿಳಿಸಿಕೊಟ್ಟ ಮೊದಲ ಶಾಸಕರಾಗಿದ್ದರು ಎಂದರು.

ಉಮ್ಮಡಹಳ್ಳಿ ನಾಗೇಶ್, ಭಗವಾನ್, ದಾಮೋಜಿರಾವ್, ಸುನಿಲ್‍ಕುಮಾರ್, ಉಮ್ಮಡಹಳ್ಳಿ ಚಂದ್ರಶೇಖರ್, ಡಿ.ಸಿ.ರವಿ, ಇತರರು ಉಪಸ್ಥಿತರಿದ್ದರು.

ಸಮತಾಸಿಂಧೂ ಟ್ರಸ್ಟ್: ದೇಶದ ಮೂಲ ಸಂಸ್ಕೃತಿಯ ನಿರ್ಮಾಪಕರಾದ ರೈತರು ಹಾಗೂ ದುಡಿಯುವ ಜನಸಮುದಾಯಗಳ ಆರ್ಥಿಕ ಅಸಮಾನತೆಗಳ ವಿರುದ್ಧ, ತಳ ಸಮುದಾಯಗಳ ಸಾಮಾಜಿಕ ನ್ಯಾಯ ಪರವಾದ ಪುಟ್ಟಣ್ಣಯ್ಯನವರ ಬಿಡುವಿಲ್ಲದ ಹೋರಾಟವು ಸದಾಕಾಲ ಇತರರಗೆ ಮಾದರಿಯಾದದ್ದು ಎಂದು ಸಮತಾಸಿಂಧೂ ಟ್ರಸ್ಟ್ ಅಧ್ಯಕ್ಷ ಪ್ರೊ.ಹುಲ್ಕೆರೆ ಮಹದೇವ ಹೇಳಿದರು.

ಹೋರಾಟದ ಅಂಗಳದಲ್ಲಿ ಇನ್ನು ಪುಟ್ಟಣ್ಣಯ್ಯನವರಂತಹ ನಾಯಕತ್ವ ಸಿಗುವುದು ಕಷ್ಟ. ಇಂತಹ ಸಂದರ್ಭದಲ್ಲಿ ಜನಪರ ಚಳವಳಿಗಳು ಅವಶ್ಯವಿರುವ ನಾಯಕತ್ವವನ್ನು ಗುರುತಿಸಿಕೊಳ್ಳಬೇಕಾದ ಸವಾಲನ್ನು ಎದುರಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಉಪಾಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ. ಕಾರ್ಯದರ್ಶಿ ನಾರಾಯಣ್ ತಳಗವಾದಿ, ಸದಸ್ಯರಾದ ಸಿ.ಕುಮಾರಿ, ಎಚ್,ಜೆ.ಚಂದ್ರಮೂರ್ತಿ ಸಭೆಯಲ್ಲಿ ಉಪಸ್ಥಿತರಿದ್ದರು.

ರಮೇಶ್‍ಬಾಬು ಬಂಡಿಸಿದ್ದೇಗೌಡ: ರಾಜ್ಯ ಹಾಗೂ ಜಿಲ್ಲೆಯ  ರೈತಪರ ಧನಿಯಾಗಿದ್ದ ಚಿಂತನಕಾರ, ಹೋರಾಟಗಾರ, ನಗುಮುಖದ ರೈತಸಂಘದ ಹಿರಿಯ ನಾಯಕ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಅವರ ನಿಧನದಿಂದ ನನ್ನ ಕುಟುಂಬದ ಹಿರಿಯ ಅಣ್ಣನನ್ನು ಕಳೆದುಕೊಂಡಂತಾಗಿದೆ ಎಂದು ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶಬಂಡಿಸಿದ್ದೇಗೌಡ ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News