ಪುಟ್ಟಣ್ಣಯ್ಯ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ: ಎನ್.ಎಲ್.ಭರತ್‍ರಾಜ್

Update: 2018-02-19 17:58 GMT

ಮಂಡ್ಯ, ಫೆ.19: ಕೆ.ಎಸ್.ಪುಟ್ಟಣ್ಣಯ್ಯ ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಬಲಿಷ್ಠ  ರೈತ ಚಳುವಳಿ ಕಟ್ಟಿದರೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಕ್ಕೆ ಒಂದು ಅರ್ಥ ಬರುತ್ತದೆ ಎಂದು ಕರ್ನಾಟಕ ಪ್ರಾಂತ ರೈತಸಂಘದ ಅದ್ಯಕ್ಷ ಎನ್.ಎಲ್.ಭರತ್‍ರಾಜ್ ಅಭಿಪ್ರಾಯಪಟ್ಟಿದ್ದಾರೆ.

ಮಳವಳ್ಳಿಯ ಜನವಾದಿ ಮಹಿಳಾ ಸಂಘಟನೆಯ ಕಛೇರಿಯಲ್ಲಿ  ಪುಟ್ಟಣ್ಣಯ್ಯನವರಿಗೆ ನಡೆದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಹಿಂದೆಂದಿಗಿಂತಲೂ ಇಂದು ಸಂಕಷ್ಟದ ಪರಿಸ್ಥಿತಿಯಲ್ಲಿರುವ ಸಂದರ್ಭ ಪುಟ್ಟಣ್ಣಯ್ಯರ ನಿಧನ ದೊಡ್ಡ ನಷ್ಟವಾಗಿದೆ ಎಂದರು.

ಅನ್ನದಾತ ಬಡತನದ ಬೇಗೆಯಲ್ಲಿ, ಸಾಲದ ಸುಳಿಯಲ್ಲಿ ಸಿಕ್ಕಿ ಸ್ವಾಭಿಮಾನದಿಂದ ಬದುಕಲಾಗಾದೆ ಆತ್ಮಗೌರವಕ್ಕೆ ಚ್ಯುತಿ ಬಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗಾದರೂ ರೈತ ಚಳವಳಿಗೆ ಪುಟ್ಟಣ್ಣಯ್ಯ ಆತ್ಮವಿಶ್ವಾಸ ತುಂಬುತ್ತಿದ್ದರು ಎಂದು ಅವರು ಸ್ಮರಿಸಿದರು. ಗ್ರಾಮೀಣ ಸೊಗಡನ್ನು ಬಹಳ ಅರ್ಥೈಸಿಕೊಂಡು ನವಿರಾಗಿ ಹಾಸ್ಯಮಯವಾಗಿ ಪ್ರತಿಯೊಂದು ಸಮಸ್ಯೆಗಳನ್ನು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನಮುಟ್ಟುವಂತೆ ತಿಳಿಸುತ್ತಿದ್ದರು. ಹತ್ತಾರು ವರುಷದ ಅವರ ಚಳುವಳಿ ಜನರಿಗೆ ಪ್ರೇರಣೆಯಾಗಿತ್ತು. ಚಳುವಳಿಗೆ ಆಗಿರುವ ನಷ್ಟವನ್ನು ತುಂಬಲು ಪ್ರತಿಯೊಬ್ಬ ಕಾರ್ಯಕರ್ತರು ಜವಬ್ದಾರಿಗಳನ್ನು ಹೊರುವುದರ ಮೂಲಕ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಬೇಕು ಎಂದು ಅವರು ಸಲಹೆ ನೀಡಿದರು.

ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ದೇವಿ, ಕಾರ್ಯದರ್ಶಿ ಸುನೀತಾ, ಸುಶೀಲಾ, ಜ್ಯೋತಿ, ಸಿಐಟಿಯು ಜಿಲ್ಲಾಧ್ಯಕ್ಷ ಜಿ.ರಾಮಕೃಷ್ಣ, ಡಿವೈಎಫ್‍ಐನ ಗುರುಸ್ವಾಮಿ, ಚಂದ್ರು, ಜವರಯ್ಯ, ಶಿವನಂಜು, ಚೌಡಪ್ಪ, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News