ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ಮಕ್ಕಳ ಘನತೆ, ಹಕ್ಕುಗಳಿಗೆ ಆದ್ಯತೆ ನೀಡಲು ಆಗ್ರಹ

Update: 2018-02-19 18:05 GMT

ಬೆಂಗಳೂರು, ಫೆ.19: ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯ ಅಂಗವಾಗಿ ಎಲ್ಲ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮಕ್ಕಳ ಘನತೆ ಹಾಗೂ ಹಕ್ಕುಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಘಟನೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ಅಂಬಣ್ಣ ಅರೋಲಿಕರ್, ಪ್ರಸವ ಪೂರ್ವ ಆರೈಕೆ ಮತ್ತು ವಿಕಸನಕ್ಕೆ ಸಂಬಂಧಿಸಿದಂತೆ ಪ್ರಾಶಸ್ತ್ಯ ನೀಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಕುರಿತು ತರಬೇತಿ ನೀಡಬೇಕು. ಇದಕ್ಕಾಗಿ ಒಬ್ಬ ಹೆಚ್ಚುವರಿ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಳ್ಳಬೇಕು. ಅಪೌಷ್ಠಿಕತೆಯನ್ನು ಹೋಗಲಾಡಿಸಲು ನ್ಯಾ.ಎನ್.ಕೆ.ಪಾಟೀಲ್ ಸಮಿತಿ ಮಾಡಿರುವ ಶಿಫಾರಸ್ಸುಗಳ ಅನುಷ್ಠಾನದ ಪರಾಮರ್ಶೆ ಮಾಡಬೇಕು. ಅಪೌಷ್ಠಿಕತೆಯ ನಿಖರತೆಗಾಗಿ ತುರ್ತಾಗಿ 6 ವರ್ಷದೊಳಗಿನ ಎಲ್ಲ ಮಕ್ಕಳ ಮರು ಸಮೀಕ್ಷೆ ಮಾಡಿಸಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಯಾವುದೇ ಒಂದು ಸರಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಘೋಷಣೆ ಮಾಡಿ, ಶಾಲೆಗಳ ಸಮಗ್ರ ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಹಾಗೂ ಖಾಯಂ ಶಿಕ್ಷಕರ ನೇಮಕಾತಿ ಮಾಡಬೇಕು. ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ ಕಾಯಿದೆಗೆ ತಿದ್ದುಪಡಿ ತಂದು 6 ವರ್ಷದೊಳಗಿನ ಮಕ್ಕಳನ್ನು ಮತ್ತು 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಕಾಯಿದೆ ವ್ಯಾಪ್ತಿಗೆ ತರಬೇಕು. ನಿಂದನೆ, ಹಿಂಸೆ, ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ ಮತ್ತು ಅಕ್ರಮ ಸಾಗಾಣಿಕೆಯಂತಹ ಸಮಸ್ಯೆಗಳಿಂದ ಹೆಣ್ಣು ಮಕ್ಕಳಿಗೆ ಭದ್ರತೆ ಹಾಗೂ ರಕ್ಷಣೆ ನೀಡಬೇಕು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ಕೇರಳ ರಾಜ್ಯದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಮಕ್ಕಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರತಿ ತಾಲೂಕಿನಲ್ಲಿ ಕ್ರೀಡಾಂಗಣವನ್ನು ಆರಂಭಿಸಬೇಕು. ಪ್ರತಿ ಹಳ್ಳಿಯಲ್ಲಿ ಕಡ್ಡಾಯವಾಗಿ ಗ್ರಾಮ ಸಭೆ ಹಾಗೂ ನಗರದಲ್ಲಿ ವಾರ್ಡ್ ಸಭೆಗಳನ್ನು ಆಯೋಜಿಸಬೇಕು. ನಗರ ಪ್ರದೇಶದ ಕೊಳಚೆ ನಿವಾಸಿಗಳ ಮಕ್ಕಳಿಗೆ, ವಲಸೆ ಬಂದ ಕುಟುಂಬಗಳ ಮಕ್ಕಳಿಗೆ, ಕನ್‌ಸ್ಟ್ರಕ್ಷನ್ ಪ್ರದೇಶದಲ್ಲಿರುವ ಮಕ್ಕಳಿಗೆ, ದಲಿತ, ಆದಿವಾಸಿ, ಅಲ್ಪಸಂಖ್ಯಾತ ಹಾಗೂ ವಿಕಲಚೇತನ ಮಕ್ಕಳಿಗೆ ಸಮಾನ ಅವಕಾಶಗಳನ್ನು ನೀಡಬೇಕು ಎಂದು ಅವರು ಮಕ್ಕಳ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ, ಅತಿ ಸೂಕ್ಷ್ಮ ಸಮುದಾಯಕ್ಕೆ ಸೇರಿದ ಮಕ್ಕಳಿಗೆ ಸುಲಭವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಒದಗಿಸಲು ಸಿದ್ಧವಿರುವುದಾಗಿ ಘೋಷಿಸಬೇಕು. ಆದಿವಾಸಿ ಮತ್ತು ಕೊಳಚೆ ಪ್ರದೇಶಗಳ ಕುಟುಂಬಗಳನ್ನು ಸ್ಥಳಾಂತರಿಸುವ ಹಾಗೂ ಒಕ್ಕಲೆಬ್ಬಿಸುವ ನೀತಿಯನ್ನು ಕೈ ಬಿಡಬೇಕು ಹಾಗೂ ಅವರಿಗೆ ಸಾಮಾಜಿಕ ಭದ್ರತೆ ನೀಡಬೇಕು. ವಲಸೆ ಬಂದ ಎಲ್ಲ ಕಾರ್ಮಿಕರಿಗೂ ಕಟ್ಟಡ ಕಾರ್ಮಿಕರ ಕಲ್ಯಾಣ ಸಮಿತಿ ವತಿಯಿಂದ ನೋಂದಣಿ ಕಾರ್ಡ್, ಗುರುತಿನ ಚೀಟಿ, ಸಾಮಾಜಿಕ ಭದ್ರತಾ ಕಾರ್ಡ್ ನೀಡಬೇಕು. ಈ ಕುಟುಂಬಗಳ ಮಕ್ಕಳಿಗೆ ರಕ್ಷಣೆ ಒದಗಿಸಬೇಕೆಂದು ಮಕ್ಕಳ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News