ಶಿಕ್ಷಕಿಗೆ ರೇಪ್ ಬೆದರಿಕೆ ಹಾಕಿದ ಏಳನೇ ತರಗತಿ ವಿದ್ಯಾರ್ಥಿ !

Update: 2018-02-21 03:56 GMT

ಗುರುಗ್ರಾಮ, ಫೆ. 21: ಇಲ್ಲಿನ ಪ್ರಸಿದ್ಧ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯೊಬ್ಬ ಆನ್‌ಲೈನ್ ಪೋಸ್ಟ್ ಮೂಲಕ ತನ್ನ ಶಿಕ್ಷಕಿ ಮತ್ತು ಆಕೆಯ ಪುತ್ರಿಯನ್ನು ರೇಪ್ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಶಿಕ್ಷಕಿಯ ಪುತ್ರಿ ಈತನ ಸಹಪಾಠಿ. ಇದೇ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಶಿಕ್ಷಕಿಗೆ ಇ-ಮೇಲ್ ಸಂದೇಶ ಕಳುಹಿಸಿ ಮುಂಬತ್ತಿ ಬೆಳಕಿನ ಡೇಟಿಂಗ್ ಹಾಗೂ ಲೈಂಗಿಕ ಚಟುವಟಿಕೆಗೆ ಆಹ್ವಾನಿಸಿದ್ದಾನೆ.

ಈ ಎರಡೂ ಘಟನೆಗಳು ನಡೆದಿರುವುದು ಕಳೆದ ವಾರ. ಅತ್ಯಾಚಾರ ಬೆದರಿಕೆಗೆ ಒಳಗಾದ ಶಿಕ್ಷಕಿ ಶಾಲೆಗೆ ಬರಲು ಆರಂಭಿಸಿದ್ದರೆ, ಈ ಆಘಾತದಿಂದಾಗಿ ಅವರ ಪುತ್ರಿ ಇನ್ನೂ ಶಾಲೆಗೆ ಬರುತ್ತಿಲ್ಲ. ಶಿಕ್ಷಕಿಯ ಗುರುತು ಬಹಿರಂಗಪಡಿಸಬಾರದು ಎಂಬ ಕಾರಣಕ್ಕೆ ಶಾಲೆಯ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.

ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳು ಶಿಕ್ಷಕಿಯರ ವಿರುದ್ಧ ಸೈಬರ್ ಅಪರಾಧಗಳತ್ತ ಆಕರ್ಷಿತರಾಗುತ್ತಿರುವುದಕ್ಕೆ ಇದು ನಿದರ್ಶನ. ಈ ಬಗ್ಗೆ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ, ಕೌನ್ಸಿಲಿಂಗ್ ನೀಡಲಾಗುತ್ತಿದೆ. ಇಂಥ ಕೃತ್ಯಗಳನ್ನು ಶಾಲೆ ಸಹಿಸುವುದಿಲ್ಲ ಎಂದು ಶಾಲೆ ಹೇಳಿಕೆ ನೀಡಿದೆ.

ಈ ಬಗ್ಗೆ ಸ್ವಯಂಪ್ರೇರಿತ ತನಿಖೆ ನಡೆಸುವುದಾಗಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶಕುಂತಲಾ ಧಲ್ ಹೇಳಿದ್ದಾರೆ. ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಅವರನ್ನು ಕರೆಸಿ ಘಟನೆ ವಿವರ ಪಡೆಯಲಾಗುವುದು. ಶಾಲಾ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ವ್ಯವಸ್ಥೆ ಮಾಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News