×
Ad

ಮೋದಿ ಸಮಾವೇಶಕ್ಕೆ ಗೈರಾದ ಬಗ್ಗೆ ಈಶ್ವರಪ್ಪ ಹೇಳಿದ್ದೇನು ?

Update: 2018-02-21 18:55 IST

ಶಿವಮೊಗ್ಗ, ಫೆ. 21: ಇತ್ತೀಚೆಗೆ ಮೈಸೂರು ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಬಿಜೆಪಿ ಸಮಾವೇಶಕ್ಕೆ ಈಶ್ವರಪ್ಪ ಗೈರು ಹಾಜರಾಗಿದ್ದು, ರಾಜ್ಯ ಬಿಜೆಪಿ ಪಾಳೇಯದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಬಿ.ಎಸ್.ಯಡಿಯೂರಪ್ಪ ಮೇಲಿನ ಮುನಿಸಿನ ಕಾರಣದಿಂದಲೇ ಗೈರಾಗಿದ್ದರು ಎಂದು ಮಾತನಾಡಿಕೊಳ್ಳಲಾಗುತ್ತಿದೆ. ಆದರೆ ಈ ಕುರಿತಂತೆ ಪ್ರತಿಕ್ರಿಯಿಸಿರುವ ಕೆ.ಎಸ್.ಈಶ್ವರಪ್ಪ, 'ನಾನು ಗೈರು ಹಾಜರಾಗಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ' ಎಂದಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ವಿಧಾನ ಮಂಡಲ ಅಧಿವೇಶನದ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಹೋಗಿಲ್ಲ. ಈ ಕುರಿತಂತೆ ನಾಯಕರಿಗೆ ಮೊದಲೇ ಮಾಹಿತಿ ನೀಡಿ, ಅವರ ಅನುಮತಿ ಕೂಡ ಪಡೆದುಕೊಂಡಿದ್ದೆ. ಈ ವಿಷಯದಲ್ಲಿ ಯಾವುದೇ ಅಪಾರ್ಥ ಕಲ್ಪಿಸುವ, ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ನನಗೆ ಯಾರ ಮೇಲೂ ಬೇಸರವಿಲ್ಲ' ಎಂದು ತಿಳಿಸಿದ್ದಾರೆ. 

ಬಿಎಸ್‍ವೈ ಸಿಎಂ: ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪರವರು ಅತ್ಯದಿಕ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ. ಮತ್ತೆ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಇತ್ತೀಚೆಗೆ ತಮ್ಮ ವಿರುದ್ದ ಹೇಳಿಕೆ ನೀಡಿದ್ದ ನಾಯಕರ ವಿರುದ್ದ ಯಾವುದೇ ಕ್ರಮಕೈಗೊಳ್ಳದ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. 

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಟಿಕೆಟ್‍ಗೆ ಸಾಕಷ್ಟು ಪೈಪೋಟಿ ಕಂಡುಬರುತ್ತಿದೆ. ಈಗಾಗಲೇ ಪಕ್ಷದ ವರಿಷ್ಠರು ಎರಡು ಸರ್ವೇಗಳನ್ನು ನಡೆಸಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಒಮ್ಮತದ ಅಭ್ಯರ್ಥಿಯ ಆಯ್ಕೆಯನ್ನು ಪಕ್ಷದ ರಾಷ್ಟ್ರೀಯ ವರಿಷ್ಠರೇ ಮಾಡಲಿದ್ದಾರೆ ಎಂದು ಹೇಳಿದರು.

ವಾಗ್ದಾಳಿ: ರಾಜ್ಯದಲ್ಲಿ ಕಾನೂನು - ಸುವ್ಯವಸ್ಥೆ ಹದಗೆಟ್ಟಿದೆ. ಆರೋಗ್ಯ ಇಲಾಖೆ ಸಂಪೂರ್ಣ ಸತ್ತು ಹೋಗಿದೆ. ರಾಜ್ಯಾದ್ಯಂತ ಸರ್ಕಾರ ಇದೆಯೋ, ಇಲ್ಲವೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿಗಳಿಗೆ ಯಾವುದೇ ಜವಾಬ್ದಾರಿಯಿಲ್ಲವಾಗಿದೆ. ಗೃಹ ಸಚಿವರು, ಆರೋಗ್ಯ ಮಂತ್ರಿಗಳು ತಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ ಎಂದು ಟೀಕಿಸಿದ್ದಾರೆ. 

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಕಾಂಗ್ರೆಸ್‍ನ ಅಂತಿಮ ಸರ್ಕಾರವಾಗಿದೆ. ರಾಜ್ಯದ ಜನತೆ ಹಿಂದೆಂದೂ ಈ ರೀತಿಯ ಬೇಜವಾಬ್ದಾರಿ, ಕೆಟ್ಟ ಸರ್ಕಾರವನ್ನು ನೋಡಿಲ್ಲ. ಶಾಸಕರ ಮಗನೇ ಗೂಂಡಾಗಿರಿ ನಡೆಸುತ್ತಾನೆ. ಸಿಎಂ ಆಪ್ತನೇ ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಸುರಿದು ಗೂಂಡಾವರ್ತನೆ ಮಾಡುತ್ತಾನೆ. ಈ ಎಲ್ಲ ಘಟನೆಗಳನ್ನು ಗಮನಿಸಿದರೆ ಜನಸಾಮಾನ್ಯರಿಗೆ ರಕ್ಷಣೆಯೇ ಇಲ್ಲ ಎಂಬಂತಾಗಿದೆ ಎಂದು ಹೇಳಿದರು.

ಬಜೆಟ್ ಅಧಿವೇಶನ ಮೊಟಕುಗೊಳಿಸಿದ ಸರ್ಕಾರದ ಕ್ರಮ ಸರಿಯಲ್ಲ. ಇದು ವಿಧಾನ ಮಂಡಲಕ್ಕೆ ಮಾಡಿದ ಅಪಮಾನವಾಗಿದೆ. ಬಜೆಟ್ ಮೇಲೆ ಸಾಕಷ್ಟು ವಿಷಯಗಳ ಚರ್ಚೆ ಮಾಡುವುದಿತ್ತು. ಪ್ರಸ್ತುತ ನಡೆದಿರುವ ಕಲಾಪದಲ್ಲಿ ಬಜೆಟ್‍ಗಿಂತ, ಇತರೆ ವಿಷಯಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗಿದೆ. ಇದೆಲ್ಲ ಗೊತ್ತಿದ್ದರೂ ಕೇವಲ ರಾಹುಲ್ ಗಾಂಧಿಯವರ ರಾಜಕೀಯ ಕಾರ್ಯಕ್ರಮಕ್ಕಾಗಿ ಅಧಿವೇಶನವನ್ನು ಸರ್ಕಾರ ಮೊಟಕುಗೊಳಿಸಿದೆ. ಈ ಮೂಲಕ ರಾಜ್ಯದ ಜನತೆಗೆ ದ್ರೋಹ ಬಗೆಯುವ ಕೆಲಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. 

ಕಲುಷಿತ ನೀರು ಸೇವಿಸಿ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಆರು ಜನ ಮೃತಪಟ್ಟಿದ್ದಾರೆ. ಹಲವರು ಅಸ್ವಸ್ಥಗೊಂಡಿದ್ದಾರೆ. ಈ ಕುರಿತು ಜಿಲ್ಲಾಡಳಿತವನ್ನು ಸಂಪರ್ಕಿಸಿದರೆ 'ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೌಲಭ್ಯದ ಕೊರತೆಯಿದೆ, ಈ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಹೇಳುತ್ತದೆ. ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಮಾತ್ರವಲ್ಲ, ಆರೋಗ್ಯ ಇಲಾಖೆ ಕೂಡ ಸತ್ತು ಹೋಗಿದೆ ಎಂದು ದೂರಿದರು. 

ರಾಜ್ಯದ ಎಲ್ಲ ಗ್ರಾಮಗಳಲ್ಲಿಯೂ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಹೆಚ್.ಕೆ.ಪಾಟೀಲ್‍ರವರು ಹೇಳುತ್ತಾರೆ. ಆದರೆ ಅದೆಷ್ಟೊ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಸಮರ್ಪಕವಾಗಿ ಆಗಿಲ್ಲ. ಮೈದೊಳಲು ಗ್ರಾಮದಲ್ಲಿ ಘಟಕ ಸ್ಥಾಪನೆಯಾಗಿದ್ದಿದ್ದರೆ ಅಮಾಯಕ ಗ್ರಾಮಸ್ಥರು ಸಾವು - ನೋವಿಗೆ ತುತ್ತಾಗುತ್ತಿರಲಿಲ್ಲ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News