ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆಗಳ 48 ದಿನಗೂಲಿ ನೌಕರರ ಸೇವಾ ಖಾತ್ರಿಗೆ ಜಿಲ್ಲಾಧಿಕಾರಿ ಆದೇಶ

Update: 2018-02-21 13:39 GMT

ಶಿವಮೊಗ್ಗ,ಫೆ.21: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಶಕಗಳಿಂದ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದ ಒಟ್ಟು 48ಮಂದಿಯ ಸೇವೆಯನ್ನು ಸಕ್ರಮಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಆದೇಶ ಹೊರಡಿಸಿದ್ದು, ಇವರ ಹಲವು ದಶಕಗಳ ಕನಸು ಕೊನೆಗೂ ಕೈಗೂಡುವಂತಾಗಿದೆ.

1986ರ ಬಳಿಕ ದಿನಗೂಲಿ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕಾತಿ ಹೊಂದಿ ಸೇವೆ ಸಲ್ಲಿಸಿರುವ ನೌಕರರನ್ನು ಸಕ್ರಮಗೊಳಿಸುವಂತೆ ನಾಲ್ಕು ಷರತ್ತುಗಳನ್ನು ವಿಧಿಸಿ ಸುಪ್ರೀಂಕೋಟ್ ಆದೇಶ ನೀಡಿತ್ತು. ಅದರ ಪ್ರಕಾರ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಗೆ ಒಟ್ಟು 67 ಪ್ರಸ್ತಾವನೆಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಸಲ್ಲಿಸಿದ್ದವು. ಇವುಗಳ ಪೈಕಿ ಒಟ್ಟು 48 ಪ್ರಸ್ತಾವನೆಗಳಿಗೆ ಜಿಲ್ಲಾ ಸಮಿತಿ ಅನುಮೋದನೆ ನೀಡಿದ್ದು, ಇದರಿಂದಾಗಿ ಅವರ ಸೇವೆ ಸಕ್ರಮಗೊಂಡಿದೆ.

ಮಹಾನಗರ ಪಾಲಿಕೆ ಶಿವಮೊಗ್ಗದ 15ಮಂದಿ, ಭದ್ರಾವತಿ ನಗರಸಭೆಯ 11ಮಂದಿ, ತೀರ್ಥಹಳ್ಳಿ ಪಟ್ಟಣ ಪಂಚಾಯತ್‍ನ 4 ಮಂದಿ, ಶಿರಾಳಕೊಪ್ಪ ಪಟ್ಟಣ ಪಂಚಾಯತ್‍ನ 6ಮಂದಿ, ಶಿಕಾರಿಪುರ ಪುರಸಭೆಯ 5ಮಂದಿ ದಿನಗೂಲಿ ನೌಕರರ ಸೇವೆ ಸಕ್ರಮಗೊಂಡಿದೆ. ಇದೇ ರೀತಿ 2008ರಲ್ಲಿ ಸೇವಾ ಖಾತ್ರಿ ಆದೇಶವಾಗಿದ್ದರೂ, ಸರ್ಕಾರದ ನಿರ್ದೇಶನದಂತೆ ತಡೆ ಹಿಡಿಯಲಾಗಿದ್ದ 7 ಪ್ರಕರಣಗಳ ದಿನಗೂಲಿ ನೌಕರರ ಸೇವೆಯನ್ನು ಸಹ ಇದೀಗ ಸಕ್ರಮಗೊಳಿಸಲಾಗಿದೆ.

ಷರತ್ತುಗಳು: ಸೇವಾ ಖಾತ್ರಿಗೆ ಪರಿಗಣಿಸಲು ಈ ಕೆಳಕಂಡ ಷರತ್ತುಗಳನ್ನು ವಿಧಿಸಲಾಗಿತ್ತು. ನೌಕರರನ್ನು ಮೂಲತಃ ಮಂಜೂರಾದ ಖಾಲಿ ಹುದ್ದೆಯಲ್ಲಿ ನೇಮಕ ಮಾಡಿರಬೇಕು. ಹೀಗೆ ನೇಮಕ ಮಾಡಿರುವಾಗ ಸಂಬಂಧಿಸಿದ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು. ಹೀಗೆ ನೇಮಕವಾದ ನೌಕರರು 10ವರ್ಷಗಳಿಗೂ ಹೆಚ್ಚಿನ ಅವಧಿಗೆ ಸತತವಾಗಿ ಅದೇ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರಬೇಕು. ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು 10ವರ್ಷಗಳಿಗೂ ಹೆಚ್ಚಿನ ಅವಧಿಗೆ ಅವರನ್ನು ಮುಂದುವರೆಸಿರಬಾರದು ಎಂದು ಷರತ್ತು ವಿಧಿಸಲಾಗಿತ್ತು.

"ದಿನಗೂಲಿ ನೌಕರರಾಗಿ ಸೇವೆಗೆ ಸೇರಿದ 10 ವರ್ಷದ ಬಳಿಕದ ದಿನಾಂಕದಿಂದ ಅನ್ವಯವಾಗುವಂತೆ ಸೇವಾ ಖಾತ್ರಿಯನ್ನು ನಿಗದಿಪಡಿಸಲಾಗಿದೆ. ಇದರಿಂದಾಗಿ ಸದರಿ ನೌಕರರಿಗೆ ಆ ದಿನಾಂಕದಿಂದಲೇ ನಿಗದಿತ ಆರ್ಥಿಕ ಸೌಲಭ್ಯಗಳು ದೊರೆಯಲಿವೆ. ಹಲವು ವರ್ಷಗಳಿಂದ ದಿನಗೂಲಿ ನೌಕರರ ಸೇವಾ ಖಾತ್ರಿ ಪ್ರಸ್ತಾವನೆಗಳು ವಿಲೇವಾರಿಗೆ ಬಾಕಿಯಿದ್ದು, ನಿರಂತರವಾಗಿ ಅವರು ಮನವಿಯನ್ನು ಸಲ್ಲಿಸುತ್ತಿದ್ದರು. ಇದೀಗ ನಿಯಮಾವಳಿ ಪ್ರಕಾರ ಅರ್ಹ ದಿನಗೂಲಿ ನೌಕರರ ಸೇವೆಯನ್ನು ಖಾತ್ರಿಪಡಿಸಲಾಗಿದೆ’’ ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ತಿಳಿಸಿದ್ದಾರೆ.

'ನಮಗೆ ಇದುವರೆಗೆ ಯಾವುದೇ ಸೇವಾ ಭದ್ರತೆ ಇರಲಿಲ್ಲ. ನಿಗದಿ ಪಡಿಸಿದ ಕೂಲಿಯನ್ನು ಹೊರತುಪಡಿಸಿ ಯಾವುದೇ ಸೌಲಭ್ಯಗಳು ದೊರೆಯುತ್ತಿರಲಿಲ್ಲ. ಆದರೆ ಇದೀಗ ನಮ್ಮ ಸೇವೆಯನ್ನು ಪರಿಗಣಿಸಿ ಕೊನೆಗೂ ಸಕ್ರಮಗೊಳಿಸಲಾಗಿರುವುದು ಅತೀವ ಸಂತಸ ತಂದಿದೆ’’ ಎಂದು ಕಳೆದ 30ವರ್ಷಗಳಿಂದ ಭದ್ರಾವತಿ ನಗರಸಭೆಯಲ್ಲಿ ದಿನಗೂಲಿ ನೌಕರರಾಗಿ ದುಡಿಯುತ್ತಿರುವ ಸೀಗೆಹಟ್ಟಿಯ ಈಶ್ವರ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News