ಮಡಿಕೇರಿ: ನಗರಸಭೆ ವಿರುದ್ಧ ಫೆ.22 ರಂದು ಜೆಡಿಎಸ್ ಉಪವಾಸ ಸತ್ಯಾಗ್ರಹ

Update: 2018-02-21 13:45 GMT

ಮಡಿಕೇರಿ, ಫೆ.21 : ನಗರಸಭೆಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳೆಂದು ಆರೋಪಿಸಿರುವ ಜಾತ್ಯಾತೀತ ಜನತಾದಳದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಕೆ.ಎಂ.ಗಣೇಶ್, ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಕಾರ್ಯವೈಖರಿಯನ್ನು ಖಂಡಿಸಿ ಪಕ್ಷದ ವತಿಯಿಂದ ನಗರಸಭೆ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.22 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರ ಸಹಕಾರದೊಂದಿಗೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದರು. ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ನಗರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಕೇವಲ ಸದಸ್ಯರುಗಳ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದು, ಕಚೇರಿಗಷ್ಟೆ ಅವರು ಸೀಮಿತವಾಗಿದ್ದಾರೆ ಎಂದು ಗಣೇಶ್ ಆರೋಪಿಸಿದರು. 

ಸಾರ್ವಜನಿಕರ ಬಳಿ ತೆರಳಿ ಕುಂದು ಕೊರತೆಗಳನ್ನು ಆಲಿಸುತ್ತಿಲ್ಲ, ಕಾಮಗಾರಿಗಳನ್ನು ಪರಿಶೀಲಿಸುತ್ತಿಲ್ಲವೆಂದು ಟೀಕಿಸಿದ ಅವರು ಕುರ್ಚಿಯನ್ನೇ ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡಿರುವ ಅಧ್ಯಕ್ಷರಿಂದ ನಗರಕ್ಕೆ ಯಾವುದೇ ಪ್ರಯೋಜನವಿಲ್ಲ. ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಪ್ರತಿಯೊಂದು ಸರಕಾರ ನೀಡುವ ಅನುದಾನದಂತೆ ಈ ಸರಕಾರವೂ ನಗರೋತ್ಥಾನದ ಅನುದಾನವನ್ನು ನೀಡಿದೆ. ರಾಜ್ಯದಲ್ಲಿ ಇವರದ್ದೇ ಸರಕಾರ ಅಧಿಕಾರದಲ್ಲಿದ್ದರೂ ನಗರಸಭೆಗೆ ವಿಶೇಷ ಅನುದಾನವನ್ನೇನು ಬಿಡುಗಡೆ ಮಾಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಗಣೇಶ್, ನಗರಸಭೆ ಕಚೇರಿಯಲ್ಲಿ ಸಾರ್ವಜನಿಕರ ಕಡತಗಳು ಸಕಾಲದಲ್ಲಿ ವಿಲೇವಾರಿಯಾಗುತ್ತಿಲ್ಲವೆಂದು ಟೀಕಿಸಿದರು. 

ಫಾರಂ ನಂ.3 ರ ಗೊಂದಲ ಮುಂದುವರೆದಿದ್ದು, ಜನನ ಮತ್ತು ಮರಣ ದೃಢೀಕರಣ ಪತ್ರಕ್ಕೂ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಯುಜಿಡಿ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ನಡೆದಿದ್ದು, ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೂ ಆಡಳಿತ ಪಕ್ಷದ ಕೆಲವರು ನಗರಸಭೆಯ ಕಾರ್ಯವೈಖರಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಗರಸಭೆಯ ಆಡಳಿತದಲ್ಲಿ ಬಿಜೆಪಿಯವರೇ ಉಪಾಧ್ಯಕ್ಷ ಸ್ಥಾನ ಹಾಗೂ ಸ್ಥಾಯಿ ಸಮಿತಿಯನ್ನು ಅಲಂಕರಿಸಿದ್ದಾರೆ. ಆದರೂ ಇತ್ತೀಚೆಗೆ ಬಿಜೆಪಿ ಮಂದಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಇದು ಅರ್ಥಹೀನ ಕ್ರಮವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಟೀಕಿಸಿದ ಗಣೇಶ್ ಅಧ್ಯಕ್ಷರು ವೈಯುಕ್ತಿಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ನಗರದ ಅಭಿವೃದ್ಧಿಗೆ ಆದ್ಯತೆ ನೀಡಲಿ ಎಂದು ಒತ್ತಾಯಿಸಿದರು. 

ಅಮಾಯಕರ ಹಾಗೂ ಬಡವರ ಅತಿಕ್ರಮಣಗಳನ್ನು ತೆರವುಗೊಳಿಸಲು ಕಾಳಜಿ ತೋರುವ ನಗರಸಭೆ ಪ್ರಭಾವಿಗಳ ಅಕ್ರಮ ಒತ್ತುವರಿ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಪ್ರಶ್ನಿಸಿದರು. 

ನಗರಸಭೆಯ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಲೀಲಾಶೇಷಮ್ಮ ಮಾತನಾಡಿ, ಅಧ್ಯಕ್ಷರು ಗಾಳಿಗೆ ಗುದ್ದಿ ಮೈನೋಯಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ನನ್ನ ಹೆಸರಿನಲ್ಲಿ ಯಾವುದೇ ಜಾಗವಿಲ್ಲ, ನಾನು ಮತ್ತು ಪತಿ ಮಾತ್ರ ಇದ್ದು, ನಮ್ಮ ಜೀವನಕ್ಕೆ ಅಧಿಕ ಆಸ್ತಿಯ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರು. ಅಧ್ಯಕ್ಷರು ಹಾಗೂ ಆಡಳಿತ ಪಕ್ಷದ ಕೆಲವು ಸದಸ್ಯರು ನನ್ನನ್ನು ಅತಿಯಾಗಿ ನೋಯಿಸಿದ್ದಾರೆ ಎಂದು ಆರೋಪಿಸಿದರು. 

ಸರಕಾರ ಅಧ್ಯಕ್ಷರಿಗೆ ವಾಹನವನ್ನು ನೀಡಿರುವುದು ಕೇವಲ ಮನೆ ಹಾಗೂ ಕಚೇರಿಗೆ ಹೋಗಿ ಬರಲು ಮಾತ್ರವಲ್ಲ, ಜನರ ಬಳಿಗೂ ಹೋಗಬೇಕು ಎಂದು ಲೀಲಾಶೇಷಮ್ಮ ಒತ್ತಾಯಿಸಿದರು. 

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾದ ಸುನಿಲ್, ಅಲ್ಪಂಖ್ಯಾತರ ಘಟಕದ ನಗರಾಧ್ಯಕ್ಷರಾದ ಇಬ್ರಾಹಿಂ, ಯುವ ಜೆಡಿಎಸ್ ನಗರಾಧ್ಯಕ್ಷರಾದ ಕಿರಣ್ ರೈ ಹಾಗೂ ಕಾರ್ಯದರ್ಶಿ ಮಂಜು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News