×
Ad

ಹೊನ್ನಾವರ: ಪರೇಶ್ ಮೇಸ್ತ ಮನೆಗೆ ಅಮಿತ್ ಶಾ ಭೇಟಿ

Update: 2018-02-21 20:24 IST

ಹೊನ್ನಾವರ,ಫೆ.21: ನಿಗೂಡವಾಗಿ ಸಾವನ್ನಪ್ಪಿದ  ಪರೇಶ್ ಮೇಸ್ತ ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬುಧವಾರ ಭೇಟಿ ನೀಡಿ, ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಸುಮಾರು 25 ನಿಮಿಷಗಳ ಕಾಲ ಮಾತುಕತೆ ನಡೆಸಿದ ಅವರು ಮಗನ ಸಾವಿಗೆ ಸೂಕ್ತ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.

ಅಮಿತ್ ಶಾ ಮೃತ ಪರೇಶ್ ಮನೆಗೆ ಭೇಟಿ ನೀಡುತ್ತಾರೆ ಎಂಬ ಸುದ್ದಿ ತಿಳಿದು ಪಟ್ಟಣದ ತುಳಸೀ ನಗರದಲ್ಲಿರುವ ಪರೇಶ್ ನಿವಾಸದ ಬಳಿ ಸಾರ್ವಜನಿಕರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಮೀನುಗಾರರ ಮುಖಂಡ ಉಮೇಶ ಮೇಸ್ತ, ಲೋಕೇಶ ಮೇಸ್ತ ಇತರರಿದ್ದರು. 

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪರೇಶ್ ತಂದೆ ಕಮಲಾಕರ ಮೇಸ್ತ, "ಅಮಿತ್ ಶಾ ರವರು ಮಗನ ಸಾವಿನ ಕುರಿತು ಚರ್ಚಿಸಲು ಹಾಗೂ ಸಾಂತ್ವನ ಹೇಳಲು ಮನೆಗೆ ಬಂದಿದ್ದರು. ಅವರಿಗೆ ನಾನು ಅಭಿನಂದಿಸುತ್ತೇನೆ. ನನ್ನ ಮಗನ ಸಾವಿನ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐ ಗೆ ವಹಿಸಿತ್ತು. ಆದರೆ ನಮ್ಮ ಮನೆಗೆ ಇದುವರೆಗೆ ಸಿಬಿಐ ತಂಡದ ಯಾವುದೇ ತನಿಖಾಧಿಕಾರಿಗಳು ಭೇಟಿ ನೀಡಿಲ್ಲ. ನಮಗೆ ಇದರಲ್ಲಿ ನ್ಯಾಯ ಸಿಗುವ ಲಕ್ಷಣಗಳು ಕಾಣುತ್ತಿಲ್ಲ ಎಂದ ಅವರು, ಅಮಿತ್ ಶಾ ಸಿಬಿಐ ತನಿಖೆ ಮೂಲಕ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ" ಎಂದರು.

ಅಮಿತ್ ಶಾ ಹೊನ್ನಾವರ ರಾಮತೀರ್ಥ ಸಮೀಪದ ಹೆಲಿಪ್ಯಾಡ್‍ಗೆ ಮಧ್ಯಾಹ್ನ 2 ಗಂಟೆಗೆ ಆಗಮಿಸಿ ನಂತರ ಪರೇಶ ಮೇಸ್ತಾ ಮನೆಗೆ ಭೇಟಿ ನೀಡಬೇಕಿತ್ತು. ಆದರೆ ಅವರು 3.45ರ ಸುಮಾರಿಗೆ ಹೆಲಿಪ್ಯಾಡ್‍ಗೆ ಆಗಮಿಸಿ ನಂತರ ಪರೇಶ ಮನೆಗೆ ಭೇಟಿ ನೀಡಿದರು. ಮಾಧ್ಯಮದವರು ಅಮಿತ್ ಶಾರೊಂದಿಗೆ ಸಮಾಲೋಚನೆಗಾಗಿ ಕಾಯುತ್ತಿದ್ದರು. ಆದರೆ ಅವರು ಮಾಧ್ಯಮದವರಿಗೆ ಯಾವ ಪ್ರತಿಕ್ರಿಯೆಯನ್ನೂ ನೀಡದೇ ತೆರಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News