×
Ad

180 ಕ್ಕೂ ಅಧಿಕ ರೌಡಿಶೀಟರ್ ಪ್ರಕರಣಗಳು ದಾಖಲು ಮಾಡಿರುವುದು ಅಪಾಯಕಾರಿ ಬೆಳವಣಿಗೆ: ಮನೋಹರ್

Update: 2018-02-21 21:11 IST

ಬಾಗೇಪಲ್ಲಿ,ಫೆ.21: ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯ ಅವದಿಯಲ್ಲಿ ತಾಲೂಕಿನಲ್ಲಿ 180 ಕ್ಕೂ ಅಧಿಕ ರೌಡಿಶೀಟರ್ ಪ್ರಕರಣಗಳು ದಾಖಲು ಮಾಡಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ವಿಧಾನ ಪರಿಷತ್ ಸದಸ್ಯ ಡಾ ಸಿ.ಆರ್.ಮನೋಹರ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗೇಪಲ್ಲಿ ತಾಲೂಕಿನಲ್ಲಿ ಯಾರೂ ಆಯುಧಗಳನ್ನು ಹಿಡಿದು ಓಡಾಡುತ್ತಿಲ್ಲ, ಅಮಾಯಕರ ಮೇಲೆ, ಶಾಸಕರ ವಿರುದ್ದ ಮಾತನಾಡುವ ಹೋರಾಟಗಾರರ ದಲಿತರ ಮೇಲೆ ಶಾಸಕರು ಪೊಲೀಸರನ್ನು ಬಳಸಿಕೊಂಡು ರೌಡಿಶೀಟರ್ ತೆರೆದಿದ್ದಾರೆ. ಅವರ ಮುಂದಿನ ಭವಿಷ್ಯ ಏನಾಗಬೇಕೆಂದು ಶಾಸಕರು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದಿದ್ದಾರೆ. ತಾಲೂಕಿನ ಇತಿಹಾಸದಲ್ಲೇ ಇಷ್ಟೊಂದು ರೌಡಿಶೀಟರ್ ಪ್ರಕರಣ ದಾಖಲು ಮಾಡಿಸಿರುವುದು ಇದೇ ಮೊದಲ ಬಾರಿ. ನಾನು 11 ತಾಲೂಕಿನ ಜನರ ಸೇವಕನಾಗಿದ್ದೇನೆ. ನನಗೆ ಈ ತಾಲೂಕಿನ ಯಾವುದೇ ಸರ್ಕಾರಿ ಕಾರ್ಯಕ್ರಮಕ್ಕೆ ಅಧಿಕಾರಿಗಳು ಮಾಹಿತಿ ನೀಡುವುದಿಲ್ಲ. ಶಾಸಕರು ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಸರ್ವಾಧಿಕಾರಿ ದೋರಣೆ ಅನುಸರಿಸುತ್ತಿದ್ದಾರೆ ಎಂದರು.

ಶಾಸಕರು ಎಲ್ಲಿ ನೋಡಿದರೂ 1200 ಕೋಟಿರೂಗಳ ಅನುದಾನ ತಂದು ಕ್ಷೇತ್ರದ ಅಭಿವೃದ್ದಿ ಮಾಡಿದ್ದೇನೆ ಎಂದು ಕಂಡ ಕಂಡಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇಷ್ಟೊಂದು ಕೋಟಿಗಳನ್ನು ತಂದು ಖರ್ಚು ಮಾಡಿದ್ದರೆ ತಾಲೂಕಿನ ಬಹುತೇಕ ರಸ್ತೆಗಳು ಹಳ್ಳ ಗುಣಿಗಳಿಂದ ಇರುತ್ತಿರಲಿಲ್ಲ.  ಡಿ.ಎಂ.ನಂಜುಂಡಪ್ಪ ವರದಿಯಂತೆ ಈ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶ. ಇದಕ್ಕೆ ತಕ್ಕ ಹಾಗೆ ಅನುದಾನ ತಂದಿಲ್ಲ. ಶಾಶ್ವತವಾದ ಯಾವುದೇ ನದಿ ನಾಲೆಗಳಿಲ್ಲ. ನಿರುದ್ಯೊಗ ಸಮಸ್ಯೆ ನೀಗಿಸಲು ಕಾರ್ಖಾನೆಗಳಿಲ್ಲ.  ಕೂಲಿ ಕಾರ್ಮಿಕರು ಕೆಲಸವಿಲ್ಲದೇ ನಗರ ಪ್ರದೇಶಗಳಿಗೆ ಗುಳೇ ಹೋಗುತ್ತಿದ್ದಾರೆ. ಇವುಗಳೆಲ್ಲವನ್ನು ಬಿಟ್ಟು ಮದುವೆಗಳನ್ನು ಮಾಡಿ ಜನರನ್ನು ಮರಳು ಮಾಡುತ್ತಿದ್ದಾರೆ. ನಾನು ಸ್ಥಳಿಯ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಏಕೆ ವಾಸವಾಗುತ್ತಿದ್ದಾರೆ? ಎಂದು ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು.

ನಾನು ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ನಮ್ಮ ಪಕ್ಷದಲ್ಲಿಯೂ ಗುಂಜೂರು ಶ್ರೀನಿವಾಸರೆಡ್ಡಿ, ಡಿ.ಜೆ.ನಾಗರಾಜರೆಡ್ಡಿ ಇಬ್ಬರು ಆಕಾಂಕ್ಷಿಗಳಿದ್ದಾರೆ. ಅವರ ಮನವೊಲಿಸಿ ಇವರನ್ನು ಜೊತೆಗೆ ಹಾಕಿಕೊಂಡು ತಾಲೂಕಿನಾದ್ಯಂತ ಪ್ರವಾಸ ಕೈಗೊಂಡು ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದು ಮುನ್ನಡೆಯುತ್ತೇನೆ. ಈ ಬಾರಿ ಈ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಯುವ ಜನತಾದಳ ಲಕ್ಷ್ಮಿನಾರಾಯಣ, ಅಲ್ಪ ಸಂಖ್ಯಾತರ ವಿಭಾಗದ ತಾಲೂಕು ಅಧ್ಯಕ್ಷ ಮಹಮದ್ ಎಸ್ ನೂರುಲ್ಲ, ಮುಖಂಡರಾದ ಸಿ.ಡಿ.ಗಂಗುಲಪ್ಪ, ಪ್ರಕಾಶ್, ಜಿನ್ನಿ, ಗೂಳೂರು ಲಕ್ಷ್ಮಿನಾರಾಯಣ, ಬಾನುಪ್ರಕಾಶ್, ಡಿ.ಸಿ.ಶ್ರೀನಿವಾಸ ಲಕ್ಷ್ಮಿನಾರಾಯಣರೆಡ್ಡಿ, ಪುರಸಭೆ ಸದಸ್ಯ ಎಲ್.ಭಾಸ್ಕರ್, ಬಾಲಾಜಿ ಪ್ರದೀಪ್, ಸುನಿಲ್, ವೆಂಕಟರಾಂ, ವಿಜಯ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News