×
Ad

ಪರೀಕ್ಷಾ ಸೂಚನೆಗಳನ್ನು ಗಮದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿ: ಡಿ.ರಂದೀಪ್

Update: 2018-02-21 22:02 IST

ಮೈಸೂರು,ಫೆ.21: ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ಯಾವುದೇ ಲೋಪಗಳು ಆಗದಂತೆ ಪರೀಕ್ಷಾ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ದ್ವಿತೀಯ ಪಿ.ಯು.ಸಿ ಪರೀಕ್ಷೆ ಸಂಬಂಧ ಅಧಿಕಾರಿಗಳ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಮತ್ತು ಸಾರ್ವಜನಿಕರು ಪರೀಕ್ಷಾ ಸಂದರ್ಭಗಳಲ್ಲಿ ಉಂಟಾಗುವ ನ್ಯೂನ್ಯತೆಗಳನ್ನು ಕಾಯುತ್ತಿರುತ್ತಾರೆ. ಪರೀಕ್ಷಾ ಸೂಚನೆಗಳ ಕೈಪಿಡಿಯನ್ನು ಓದಿಕೊಂಡು ಸೂಚನೆಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಮಾರ್ಚ್ 1 ರಿಂದ 17 ರವರೆಗೆ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 50 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುವುದು. ಮೈಸೂರು ತಾಲೂಕು -26, ಕೆ.ಆರ್.ನಗರ- 3, ಪಿರಿಯಾಪಟ್ಟಣ -4, ಹುಣಸೂರು- 4, ತಿ.ನರಸೀಪುರ  6, ನಂಜನಗೂಡು  4 ಹಾಗೂ ಹೆಚ್.ಡಿ.ಕೋಟೆ -3 ಕೇಂದ್ರಗಳನ್ನು ತೆರೆಯಲಾಗುವುದು ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ದಯಾನಂದ್  ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 37,205 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 28,961 ಹೊಸ, 6344 ಪುನರಾವರ್ತಿತ ಹಾಗೂ 1900 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿಯ 7468, ಪರಿಶಿಷ್ಟ ಪಂಗಡ 3526 ಹಾಗೂ ಹಿಂದುಳಿದ ವರ್ಗದ 26211 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯತ್ತಿದ್ದಾರೆ ಎಂದರು.

ಪರೀಕ್ಷಾ ಕೇಂದ್ರಗಳು ಸಿ.ಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿರುತ್ತವೆ. ಗೈರುಹಾಜರಾದ ವಿದ್ಯಾರ್ಥಿಗಳ ಸ್ಥಳದಲ್ಲಿ ಇತರೆ ಯಾವುದೇ ವಿದ್ಯಾರ್ಥಿಗಳನ್ನು ಕೂರಿಸಬಾರದು ಎಂದರು. ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯಕ್ಕೆ ಪ್ರಶ್ನೆ ಪತ್ರಿಕೆ ಸಾಗಿಸಲು ಸುಸ್ಥಿತಿಯಲ್ಲಿರುವ ವಾಹನಗಳನ್ನು ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಪರೀಕ್ಷೆ ಕೆಲಸ ನಿರ್ವಹಿಸುವ ಮುಖ್ಯ ಅಧೀಕ್ಷಕರು ಪರೀಕ್ಷಾ ಕ್ರಮ ಮತ್ತು ಜವಾಬ್ದಾರಿ ಹಾಗೂ ಸೂಚನೆಗಳನ್ನು ಪಾಲಿಸಿ ಯಶಸ್ವಿಯಾಗಿ ಜಿಲ್ಲೆಯಲ್ಲಿ ಪರೀಕ್ಷೆ ನಡೆಸಲು ಕಾರ್ಯನಿರ್ವಹಿಸಬೇಕು ಎಂದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಮತ, ಕೆ.ಎ.ಎಸ್ ಪ್ರೊಬೆಷನರಿ ರಾಜು, ಮೈಸೂರು ತಾಲೂಕು ತಹಶೀಲ್ದಾರ್ ರಮೇಶ್ ಬಾಬು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News