×
Ad

ಜಾನಪದ ಕಲೆ ಎಂದಿಗೂ ನಶಿಸಲಾರದು: ಪಿ.ಕೆ.ರಾಜಶೇಖರ್

Update: 2018-02-21 22:05 IST

ಮೈಸೂರು,ಫೆ.21: ಜಾನಪದ ಕಲೆ ಎಂಬುದು ಯಾವತ್ತೂ ನಶಿಸಲಾರದು. ಈ ಕಲೆ ವಿನಾಶವಾಗುವುದಿಲ್ಲ. ಒಂದಲ್ಲ ಒಂದು ರೂಪದಲ್ಲಿ ಮತ್ತೆ ಮತ್ತೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ ಎಂದು ಹೆಸರಾಂತ ಜಾನಪದ ವಿದ್ವಾಂಸ ಹಾಗೂ ವಿಶ್ರಾಂತ ಕನ್ನಡ ಅಧ್ಯಾಪಕ ಡಾ.ಪಿ.ಕೆ.ರಾಜಶೇಖರ್ ಹೇಳಿದರು.

ಹೆಚ್.ಡಿ.ಕೋಟೆ ತಾಲೂಕು ಜಿ.ಬಿ.ಸರಗೂರಿನ ಸರ್ಕಾರಿ ಪ್ರೌಢಶಾಲೆ ಹಾಗೂ ಮೈಸೂರಿನ ಬ್ಲೂಕ್ಯಾನ್ವಾಸ್ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಶಾಲಾ ಮಕ್ಕಳ ತೊಗಲು ಗೊಂಬೆ ಚಿತ್ರಪ್ರದರ್ಶನ “ಚಿಣ್ಣರ ಕಲಾ ಬಿಂಬ” ನಶಿಸುತ್ತಿರುವ ಕಲೆಗಳಿಗೆ ಮರುಜೀವದ ಭಾವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಮಕ್ಕಳು ತುಂಬಾ ಅರ್ಪಣಾ ಮನೋಭಾವದಿಂದ, ಬದ್ಧತೆಯಿಂದ, ಪ್ರೀತಿಯಿಂದ ಬಿಡಿಸಿರುವ ಚಿತ್ರಗಳ ರೀತಿ ಆಶ್ಚರ್ಯ ಹಾಗೂ ಸೋಜಿಗವನ್ನು ಉಂಟುಮಾಡುತ್ತದೆ. ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ಚಿತ್ರ ಬಿಡಿಸಿದ್ದಾರೆ. ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸಿ ಪ್ರೊತ್ಸಾಹಿಸುವ ಇಂತಹ ಅಧ್ಯಾಪಕರನ್ನು ರಾಷ್ಟ್ರದ ರೂವಾರಿ ಎನ್ನಬಹುದು ಎಂದರು.

ಮಕ್ಕಳನ್ನು ಕಲಾತ್ಮಕ ಬದುಕಿನೆಡೆಗೆ ಕೊಂಡೊಯ್ಯಬೇಕು. ಅವರ ಬದುಕು ಸುಖ ಶಾಂತಿಯಿಂದ ಇರುವಂತೆ, ಸತ್ಪ್ರಜೆಗಳಾಗಿ ರೂಪಿಸಬೇಕು ಎಂಬ ಆದರ್ಶ ಇಟ್ಟುಕೊಂಡು ಈ ಶಾಲೆಯ ಅಧ್ಯಾಪಕರು ಕೆಲಸ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಹಳ್ಳಿಯ ಮಕ್ಕಳನ್ನು ಹೇಗೆ ತಿದ್ದಿ-ತೀಡಿ ಬೆಳೆಸಬಹುದು ಎಂಬುದಕ್ಕೆ ಜಿ.ಬಿ.ಸರಗೂರಿನ  ಪ್ರೌಢಶಾಲೆ ಮಾದರಿಯಾಗಿದೆ. ಸರ್ಕಾರಿ ಶಾಲೆ ಎಂದರೆ ಇತ್ತೀಚೆಗೆ ಹೆಚ್ಚು ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಆದರೆ ಸರ್ಕಾರಿ ಶಾಲೆಯ ಮಕ್ಕಳನ್ನು ಬಹಳ ಎತ್ತರಕ್ಕೆ ಯಾವುದೇ ಖಾಸಗಿ ಶಾಲೆಗಿಂತ ಉತ್ತಮವಾಗಿ ಬೆಳೆಸಿದ್ದಾರೆ ಎಂದು ಹೇಳಿದರು. ತೊಗಲು ಗೊಂಬೆಯನ್ನು ಜಿಂಕೆಯ ಚರ್ಮದಿಂದ ಮಾಡಿ ಬಿಳಿ ಪರದೆಯ ಮೇಲೆ ಅದರ ಬಿಂಬ ಬೀಳುವಂತೆ ಪ್ರದರ್ಶಿಸಲಾಗುತ್ತಿತ್ತು. ಈಗ ಜಿಂಕೆಯ ಚರ್ಮ ಬಳಸುವುದು ಅಪರಾಧವಾಗುವುದರಿಂದ ಮೇಕೆಯ ಚರ್ಮ ಬಳಸಿ ಬಿಳಿ ಪರದೆಯ ಮೇಲೆ ಅದರ ಬೆಳಕಿನ ಬಿಂಬ ಪ್ರದರ್ಶಿಸಲಾಗುತ್ತದೆ ಎಂದು ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ಸ್ ನ ಪ್ರಾಂಶುಪಾಲರಾದ ಮಹದೇವಶೆಟ್ಟಿ ಹೇಳಿದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು, ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆ ಮುಖ್ಯೋಪಧ್ಯಾಯ ಮಲ್ಲೇಶ್, ಸಂಗೀತ ಶಿಕ್ಷಕರಾದ ಸಂಗೀತಾ ಕೆ. ತಾಲೂಕು ಪಂಚಾಯತಿ ಸದಸ್ಯ ನಟರಾಜ್, ಗ್ರಾಮ ಪಂಚಾಯತ್  ಅಧ್ಯಕ್ಷ ರಾಮಯ್ಯ, ಎಸ್.ಡಿ.ಎಂ.ಸಿ.ಅಧ್ಯಕ್ಷ ಶಿವರಾಮ್, ಊರಿನ ನಾಟಕ ಶಿಕ್ಷಕರಾದ ಕರೀಗೌಡ, ಬ್ಲೂಕ್ಯಾನ್ವಾಸ್‍ನ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.  

ಕಲಾಪ್ರದರ್ಶನದಲ್ಲಿ ವಿದ್ಯಾರ್ಥಿಗಳಾದ ಅರ್ಚನ ಸಿ, ಅಖಿಲ ಎಂ, ಅಶ್ವಿನಿ ಎಸ್, ಅಶ್ವತ್ಥ ಎಂ, ಚರಣ್ ಸಿ, ದರ್ಶನ್ ಆರ್, ದೀಪಕ್ ಗೌಡ, ದೀಪಿಕಾ, ಕೀರ್ತನಾ ಕೆ, ಕಾವ್ಯ ಜಿ. ಮನೋಜ್ ಕುಮಾರ್ ಎಸ್. ನಿಸರ್ಗ ಎಸ್, ನಿಶ್ಚಿತ ಎಸ್, ಪಲ್ಲವಿ ಎಸ್, ಪ್ರೀತಿ ಎಸ್, ಪ್ರೇಮ ಪ, ಪುಷ್ಪಲತಾ ಜೆ, ರಾಧಿಕಾ ಆರ್. ರಂಜನಿ ಎನ್, ರಕ್ಷಿತಾ ಜೆ, ರಕ್ಷಿತಾ ಎಸ್, ರೂಪ ಟಿ, ಸಚಿನ್ ಟಿ, ಸಂದೀಪ್ ಎನ್, ಸಿಂಧೂ ಎಸ್, ಶ್ವೇತಾ ಎಂ, ಸುಚಿತ್ರ ಎಂ, ಸುನಿಲ್ ಕುಮಾರ್ ಬಿ, ಸ್ಪಂದನ ಸಿ, ಸತೀಶ್ ಕೆ, ಸ್ವಾತಿ ಇ, ವೇಣುಗೋಪಾಲ್ ಎನ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News