ಪುಟ್ಟಣ್ಣಯ್ಯ ಅಂತ್ಯ ಸಂಸ್ಕಾರಕ್ಕೆ 30 ಜಿಲ್ಲೆಯ ಮಣ್ಣು: ಬಡಗಲಪುರ ನಾಗೇಂದ್ರ
ಮೈಸೂರು,ಫೆ.21: ಇತ್ತೀಚೆಗೆ ನಿಧನರಾದ ರೈತ ಮುಖಂಡ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯನವರ ಅಂತ್ಯ ಸಂಸ್ಕಾರ ನಾಳೆ ಮಧ್ಯಾಹ್ನ 12 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕ್ಯಾತಮಾರನಹಳ್ಳಿಯ ಶ್ರಿಯುತರ ತೋಟದಲ್ಲಿ ನೆರವೇರಿಸಲಾಗುವುದು ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಎಸ್‍ಎಸ್ ಕಾಲೇಜಿನಲ್ಲಿರುವ ಪುಟ್ಟಣ್ಣಯ್ಯನವರ ಪಾರ್ಥವ ಶರೀರವನ್ನು ನಾಳೆ ಬೆಳಗ್ಗೆ 6 ಗಂಟೆಗೆ ಕ್ಯಾತಮಾರನಹಳ್ಳಿಗೆ ಕೊಂಡೊಯ್ಯಲಿದ್ದು, ಅಲ್ಲಿ ಕುಟುಂಬ ಸದಸ್ಯರು ಅಂತಿಮ ನಮನ ಸಲ್ಲಿಸಿದ ನಂತರ ಪಾಂಡವಪುರದ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಬೆಳಗ್ಗೆ 10.30ರವರೆಗೆ ಅವಕಾಶ ನೀಡಲಾಗುವುದು. ನಂತರ 12 ಗಂಟೆಯೊಳಗೆ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಪುಟ್ಟಣ್ಣಯ್ಯನವರ ಅಂತ್ಯ ಸಂಸ್ಕಾರದ ವಿವರ ನೀಡಿದರು.
ಅಂತ್ಯ ಸಂಸ್ಕಾರಕ್ಕೆ ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ನಡೆಸಿದ್ದು, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ವಿವಿಧ ಜಿಲ್ಲೆಯ ರೈತರು ತಮ್ಮ ನೆಲದ ಒಂದು ಹಿಡಿ ಮಣ್ಣನ್ನು ತರಲಿದ್ದು, ಸುಮಾರು 30 ಜಿಲ್ಲೆಯ ಮಣ್ಣು ನಾಳೆ ಸೇರಲಿದೆ. ಅಲ್ಲದೇ ಯಾವುದೇ ವೈದಿಕ ಪದ್ಧತಿಯಿಲ್ಲದೆ ಅವರಿಚ್ಚೆಯಂತೆ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ ಎಂದು ಹೇಳಿದರು.
ಅಂತ್ಯ ಸಂಸ್ಕಾರದಲ್ಲಿ ಸ್ವರಾಜ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್, ರಾಜ್ಯಾಧ್ಯಕ್ಷ ಪ್ರೊ.ಅಜೀಜ್ ಜಾ, ಜೈ ಕಿಸಾನ್ ಆಂದೋಲನದ ರಾಷ್ಟ್ರಿಯ ಅಧ್ಯಕ್ಷ ಅವೀಕ್ಷಾ, ಅಗ್ನಿಶ್ರೀಧರ್, ಸಚಿವ ರಮೇಶ್ ಕುಮಾರ್ ಸೇರಿದಂತೆ ಹಲವಾರು ರಾಷ್ಟ್ರ ನಾಯಕರು, ಜನಪ್ರತಿನಿಧಿಗಳು ಭಾಗಿಯಾಗುವರು ಎಂದು ತಿಳಿಸಿದರು.
ಅಂತ್ಯ ಸಂಸ್ಕಾರ ನಂತರ ಮುಂದಿನ ರೂಪುರೇಷಗಳ ಬಗ್ಗೆ ಚರ್ಚಿಸಲು ಮಧ್ಯಾಹ್ನ 3.30ಕ್ಕೆ ರಾಜ್ಯ ರೈತ ಸಂಘದ ತುರ್ತು ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ. ಫೆ.27ರಂದು ನಗರದ ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ಪುಟ್ಟಣ್ಣಯ್ಯನವರ ಶ್ರದ್ದಾಂಜಲಿ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಫೆ.28ರಂದು ಕ್ಯಾತಮಾರನಹಳ್ಳಿಯ ಕ್ರೀಡಾಂಗಣದಲ್ಲಿ ವಿವಿದ ಕ್ಷೇತ್ರದ ಸಾಧಕರಿಗೆ ಕಾಯಕ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಗೋಪಾಲ ವಸಂತ ಕುಮಾರ್, ಮಂಡಕಳ್ಳಿ ಮಹೇಶ್, ನಾಗನಹಳ್ಳಿ ವಿಜಯೇಂದ್ರ ಇದ್ದರು.